ಅಂಬೇಡ್ಕರ್ ವಿವಾದದ ನಡುವೆ ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆ ಪ್ರಕಟಿಸಿದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | PTI
ಹೊಸದಿಲ್ಲಿ : ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದಲಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ಡಾ. ಅಂಬೇಡ್ಕರ್ ಸಮ್ಮಾನ್ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಕಟಿಸಿದ್ದಾರೆ. ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಗಳ ಕುರಿತು ವಿವಾದದ ನಡುವೆಯೇ ಕೇಜ್ರಿವಾಲ್ ರ ಪ್ರಕಟಣೆ ಹೊರಬಿದ್ದಿದೆ.
ವಿದ್ಯಾರ್ಥಿ ವೇತನವು ಅಂಬೇಡ್ಕರ್ ಅವರನ್ನು ಅವಮಾನಿಸಿ ಶಾ ನೀಡಿದ್ದ ಹೇಳಿಕೆಗಳಿಗೆ ಉತ್ತರವಾಗಿದೆ ಎಂದೂ ಕೇಜ್ರಿವಾಲ್ ಹೇಳಿದರು.
ಇಲ್ಲಿ ರ್ಯಾಲಿಯೊಂದರಲ್ಲಿ ಯೋಜನೆಯನ್ನು ಅನಾವರಣಗೊಳಿಸಿದ ಅವರು, ಫೆಬ್ರವರಿ 2025ರ ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆದ್ದರೆ ದಿಲ್ಲಿ ಸರಕಾರವು ವಿದೇಶಿ ವಿವಿಗಳಲ್ಲಿ ವ್ಯಾಸಂಗ ನಿರತ ದಲಿತ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ಒದಗಿಸಲಿದೆ ಎಂದು ಭರವಸೆಯನ್ನು ನೀಡಿದರು.
ದಿಲ್ಲಿಯ ದಲಿತ ವಿದ್ಯಾರ್ಥಿಗಳು ಹಣಕಾಸಿನ ಕೊರತೆಯಿಂದಾಗಿ ವಿದೇಶಿ ವಿವಿಗಳಲ್ಲಿ ತಮ್ಮ ವ್ಯಾಸಂಗವನ್ನು ನಿಲ್ಲಿಸಬೇಕಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೂ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್(ಎಲ್ಎಸ್ಇ)ನಲ್ಲಿ ಓದುತ್ತಿದ್ದಾಗ ಹಣಕಾಸಿನ ಮುಗ್ಗಟ್ಟಿನಿಂದಾಗಿ ತನ್ನ ವ್ಯಾಸಂಗಕ್ಕೆ ವಿರಾಮ ನೀಡಿದ್ದರು. ಅಂತಿಮವಾಗಿ ಭಾರತಕ್ಕೆ ಮರಳಿದ್ದ ಅವರು ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ಎಲ್ಎಸ್ಇಯಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಶಾ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ಅವರು ದಲಿತರ ಆರಾಧ್ಯ ಪುರುಷನನ್ನು ಅಪಹಾಸ್ಯ ಮಾಡಿದ್ದಾರೆ. ಶಾ ಹೇಳಿಕೆಗಳಿಂದ ತನಗೆ ಮಾತ್ರವಲ್ಲ,ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೂ ನೋವುಂಟಾಗಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಮರಳಿದರೆ ಪ್ರತಿ ಮಹಿಳೆಗೆ ಮಾಸಿಕ 2,100 ರೂ.ಗಳ ಆರ್ಥಿಕ ನೆರವು ಮತ್ತು ಹಿರಿಯ ನಾಗರಿಕರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ನೆರವು ಒದಗಿಸುವುದಾಗಿ ಕೇಜ್ರಿವಾಲ್ ಈಗಾಗಲೇ ಭರವಸೆ ನೀಡಿದ್ದಾರೆ.