ಕೇಜ್ರಿವಾಲ್ ಅಬಕಾರಿ ನೀತಿ ಹಗರಣದ ರೂವಾರಿ | ಸುಪ್ರೀಂ ಕೋರ್ಟ್ಗೆ ತಿಳಿಸಿದ ಈಡಿ
ಅರವಿಂದ ಕೇಜ್ರಿವಾಲ್ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ ರೂವಾರಿ ಹಾಗೂ ಪ್ರಮುಖ ಸಂಚುಕೋರ. ಸಾಕ್ಷ್ಯಾಧಾರಗಳ ಮೇಲೆ ಅಪರಾಧ ಪ್ರಕರಣದಲ್ಲಿ ವ್ಯಕ್ತಿಯ ಬಂಧನ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪರಿಕಲ್ಪನೆಯನ್ನು ಎಂದಿಗೂ ಉಲ್ಲಂಘಿಸುವುದಿಲ್ಲ ಎಂದು ಜಾರಿ ನಿರ್ದೇಶನಾಲಯ(ಈಡಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಕೇಜ್ರಿವಾಲ್ ಅವರು ತಮ್ಮ ಸಚಿವರು ಹಾಗೂ ಆಪ್ ನಾಯಕರೊಂದಿಗೆ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ಅಬಕಾರಿ ನೀತಿಯಲ್ಲಿ ನೀಡಿದ ಅನುಕೂಲತೆಗಳಿಗೆ ಬದಲಾಗಿ ಮದ್ಯದ ಉದ್ಯಮಿಗಳಿಗೆ ಲಂಚದ ಬೇಡಿಕೆ ಇರಿಸುವಲ್ಲಿ ಕೂಡ ಅವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದೆ.
‘‘ದಿಲ್ಲಿ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರಿವಾಲ್ ಅವರು ದಿಲ್ಲಿ ಸರಕಾರದ ಸಚಿವರು, ಆಪ್ನ ನಾಯಕರು ಹಾಗೂ ಇತರ ವ್ಯಕ್ತಿಗಳೊಂದಿಗೆ ಸೇರಿಕೊಂಡು ಈ ಹಗರಣ ನಡೆಸಿದ್ದಾರೆ. ಅಲ್ಲದೆ, ಅವರು ಈ ಹಗರಣದ ರೂವಾರಿ ಹಾಗೂ ಮುಖ್ಯ ಸಂಚುಕೋರರಾಗಿದ್ದಾರೆ’’ ಎಂದು ಜಾರಿ ನಿರ್ದೇಶನಾಲಯ(ಈಡಿ) ಸಲ್ಲಿಸಿದ 734 ಪುಟಗಳ ಅಫಿಡಾವಿಟ್ನಲ್ಲಿ ಹೇಳಲಾಗಿದೆ.