ಕೇಜ್ರಿವಾಲ್ ಸಿಂಹ, ಅವರನ್ನು ದೀರ್ಘಕಾಲ ಜೈಲಿನಲ್ಲಿ ಬಂಧಿಸಿಡಲು ಸಾಧ್ಯವಿಲ್ಲ: ಸುನಿತಾ ಕೇಜ್ರಿವಾಲ್
ದಿಲ್ಲಿಯಲ್ಲಿ ʼಇಂಡಿಯಾʼ ಮೈತ್ರಿಕೂಟದ ಶಕ್ತಿ ಪ್ರದರ್ಶನ
ಸುನಿತಾ ಕೇಜ್ರಿವಾಲ್ | Photo: X
ಹೊಸದಿಲ್ಲಿ: “ನಮ್ಮ ಪ್ರಧಾನಿ ನರೇಂದ್ರ ಮೋದಿ ನನ್ನ ಪತಿಯನ್ನು ಜೈಲಿನಲ್ಲಿಟ್ಟಿದ್ದಾರೆ. ಅವರು ಸರಿಯಾದ ಕೆಲಸ ಮಾಡಿದ್ದಾರೆಯೆ? ಕೇಜ್ರಿವಾಲ್ ಜೈಲಿನಲ್ಲಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕೆ? ನಿಮ್ಮ ಕೇಜ್ರಿವಾಲ್ ಸಿಂಹವಾಗಿದ್ದಾರೆ. ಅವರನ್ನು ದೀರ್ಘ ಕಾಲ ಜೈಲಿನಲ್ಲಿಡಲು ಅವರಿಗೆ ಸಾಧ್ಯವಾಗುವುದಿಲ್ಲ” ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರ ಬಂಧನ, ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಖಂಡಿಸಿ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ ‘ಪ್ರಜಾತಂತ್ರ ಉಳಿಸಿ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೇಶದ ಜನರಿಗಾಗಿ ನೀಡಿರುವ ಆರು ಗ್ಯಾರಂಟಿಗಳನ್ನೂ ಅವರು ಪ್ರಕಟಿಸಿದರು. 24 ಗಂಟೆಗಳ ಕಾಲ ವಿದ್ಯುತ್, ಬಡವರಿಗೆ ಉಚಿತ ವಿದ್ಯುತ್, ಉತ್ತಮ ಸರಕಾರಿ ಶಾಲೆಗಳು ಹಾಗೂ ಮೊಹಲ್ಲಾ ಕ್ಲಿನಿಕ್ ಗಳ ನಿರ್ಮಾಣ ಇತ್ಯಾದಿಗಳು ಈ ಗ್ಯಾರಂಟಿಯಲ್ಲಿ ಸೇರಿವೆ.
ಇದೇ ವೇಳೆ ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿರುವ ತಮ್ಮ ಪತಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಲಿಖಿತ ಸಂದೇಶವನ್ನು ಸುನೀತಾ ಕೇಜ್ರಿವಾಲ್ ಓದಿದರು.
ಇಂಡಿಯಾ ಮೈತ್ರಿಕೂಟದ ಶಕ್ತಿ ಪ್ರದರ್ಶನ
ಅರವಿಂದ್ ಕೇಜ್ರಿವಾಲ್ ಬಂಧನ ಹಾಗೂ ವಿರೋಧ ಪಕ್ಷಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಖಂಡಿಸಿ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಆಯೋಜಿಸಿರುವ ‘ಪ್ರಜಾತಂತ್ರ ಉಳಿಸಿ’ ಬೃಹತ್ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ಈ ಸಮಾವೇಶದಲ್ಲಿ ವಿರೋಧ ಪಕ್ಷಗಳ ಪ್ರಮುಖ ನಾಯಕರಾದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, NCP (ಶರದ್ ಚಂದ್ರ ಪವಾರ್ ಬಣ) ವರಿಷ್ಠ ಶರದ್ ಪವಾರ್, ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ, ಆರ್ಜೆಡಿಯ ತೇಜಸ್ವಿ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಡೆರೆಕ್ ಒ’ಬ್ರಿಯನ್ ಭಾಗವಹಿಸಿದ್ದಾರೆ. ಈ ಮೂಲಕ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟು ಮತ್ತು ಸಾಮರ್ಥ್ಯದ ಪ್ರದರ್ಶನಕ್ಕೆ ಈ ಸಮಾವೇಶವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ.