ಕೇಜ್ರಿವಾಲ್ ರಾಷ್ಟ್ರೀಯ ಹಿತಾಸಕ್ತಿಗಿಂತ ತನ್ನ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ : ದಿಲ್ಲಿ ಹೈಕೋರ್ಟ್

ಕೇಜ್ರಿವಾಲ್ | PC : PTI
ಹೊಸದಿಲ್ಲಿ : ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ)ಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ದಿಲ್ಲಿ ಉಚ್ಛ ನ್ಯಾಯಾಲಯವು, ಕೇಜ್ರಿವಾಲ್ ಜೈಲಿನಲ್ಲಿದ್ದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೇ ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಮೆರೆದಿದ್ದಾರೆ ಎಂದು ಕಿಡಿಕಾರಿದೆ.
ಎಂಸಿಡಿಯಲ್ಲಿನ ತಿಕ್ಕಾಟದಿಂದಾಗಿ ಅದು ನಡೆಸುತ್ತಿರುವ ಶಾಲೆಗಳ ದುಃಸ್ಥಿತಿಯನ್ನು ಪ್ರಸ್ತಾವಿಸಿ ಎನ್ಜಿಒ ಸೋಷಿಯಲ್ ಜ್ಯೂರಿಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಹಂಗಾಮಿ ಮುಖ್ಯ ನ್ಯಾಯಾಧೀಶ (ಎಸಿಜೆ) ಮನ್ ಮೋಹನ್ ಮತ್ತು ನ್ಯಾ.ಮನಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಪೀಠವು ಈ ಚಾಟಿಯೇಟನ್ನು ನೀಡಿತು.
ದಿಲ್ಲಿ ಸರಕಾರವು ಅಧಿಕಾರದ ಮೇಲೆ ಹಿಡಿತ ಸಾಧಿಸಲು ಮಾತ್ರ ಆಸಕ್ತಿ ಹೊಂದಿದೆ ಎಂದು ಹೇಳಿದ ನ್ಯಾಯಾಲಯವು,ರಾಷ್ಟ್ರೀಯ ಹಿತಾಸಕ್ತಿಯು ಪರಮೋಚ್ಛ ಎಂದು ತಾನು ಈವರೆಗೆ ನಯವಾಗಿ ಒತ್ತಿ ಹೇಳಿದ್ದೇನೆ, ಆದರೆ ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಸದ್ರಿ ಪ್ರಕರಣವು ಎತ್ತಿ ತೋರಿಸಿದೆ. ಸೋಮವಾರ ಈ ವಿಷಯದಲ್ಲಿ ತಾನು ಆದೇಶವನ್ನು ಹೊರಡಿಸಲಿದ್ದೇನೆ ಎಂದು ತಿಳಿಸಿತು.
‘ನೀವು ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ನಿಮ್ಮ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದೀರಿ ಎಂದು ಹೇಳಲು ನಮಗೆ ವಿಷಾದವೆನಿಸುತ್ತದೆ. ಅದು ಅತ್ಯಂತ ಸ್ಪಷ್ಟವಾಗಿದೆ. ನೀವು ರಾಜಕೀಯ ಹಿತಾಸಕ್ತಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದ್ದೀರಿ ’ ಎಂದು ಹೇಳಿದ ಪೀಠವು,‘ನಿಮಗೆ ಎಷ್ಟು ಅಧಿಕಾರ ಬೇಕು ಎನ್ನುವುದು ನಮಗೆ ಗೊತ್ತಿಲ್ಲ. ಸಮಸ್ಯೆಯೇನೆಂದರೆ ನೀವು ಅಧಿಕಾರದ ಮೇಲೆ ಹಿಡಿತಕ್ಕೆ ಪ್ರಯತ್ನಿಸುತ್ತಿದ್ದೀರಿ ಮತ್ತು ಅದೇ ಕಾರಣಕ್ಕೆ ಅದು ನಿಮಗೆ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿತು.
ಆಡಳಿತವು ನಿಷ್ಕ್ರಿಯಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಬಯಸಿದರೆ ಅದು ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದ ಪೀಠವು, ನಾಯಕತ್ವ ವಹಿಸುವ ವ್ಯಕ್ತಿಗಳು ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. ಏಕೆಂದರೆ ಇದು ಓರ್ವ ವ್ಯಕ್ತಿಯ ಉನ್ನತಿಯ ವಿಷಯವಲ್ಲ ಎಂದಿತು.
ತಾನು ಮುಖ್ಯಮಂತ್ರಿಗಳ ಪರವಾಗಿ ಹಾಜರಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ದಿಲ್ಲಿ ಸರಕಾರದ ಪರ ವಕೀಲರು, ಸ್ಥಾಯಿ ಸಮಿತಿಯ ಅನುಪಸ್ಥಿತಿಯಲ್ಲಿಯೂ ಎಂಸಿಡಿ ಆಯುಕ್ತರು ಹಣಕಾಸು ಅನುಮೋದನೆಗಳಿಗಾಗಿ ವಿಧ್ಯುಕ್ತ ಮನವಿಯನ್ನು ಸಲ್ಲಿಸಿದರೆ ಶಿಕ್ಷಣ ಸಾಮಗ್ರಿಗಳ ಪೂರೈಕೆ ಸಮಸ್ಯೆಯು ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
ದಿಲ್ಲಿಯ ನಗರಾಭಿವೃದ್ಧಿ ಸಚಿವ ಸೌರಭ್ ಭಾರಧ್ವಾಜ್ ಅವರನ್ನೂ ಟೀಕಿಸಿದ ನ್ಯಾ.ಮನ್ ಮೋಹನ್, ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅವರು ಕಣ್ಣಿದ್ದೂ ಕುರುಡರಾಗಿದ್ದಾರೆ ಮತ್ತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕುಟುಕಿದರು.
ಭಾರಧ್ವಾಜ್ ನಿರ್ದೇಶನದ ಮೇರೆಗೆ ದಿಲ್ಲಿ ಸರಕಾರದ ವಕೀಲರು ಹಾಜರಾಗಿದ್ದಾರೆ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು, ‘ಮುಖ್ಯಮಂತ್ರಿಗಳು ಬಂಧನದಲ್ಲಿರುವುದರಿಂದ ನಾವೇನೂ ಮಾಡಲು ಸಾಧ್ಯವಿಲ್ಲ ಎಂಬ ನಿಮ್ಮ ಹೇಳಿಕೆಯನ್ನು ನಾವು ದಾಖಲಿಸಿಕೊಳ್ಳುತ್ತೇವೆ. ಅದು ಅವರ ವೈಯಕ್ತಿಕ ನಿರ್ಧಾರವಾಗಿದ್ದರೆ ಅವರಿಗೆ ಶುಭವಾಗಲಿ. ಮುಖ್ಯಮಂತ್ರಿ ಜೈಲಿನಲ್ಲಿದ್ದರೂ ಮುಂದುವರಿಯುತ್ತಾರೆ ಎಂದು ಹೇಳುವುದು ನಿಮ್ಮ ಆಯ್ಕೆಯಾಗಿದೆ. ನಾವಿದನ್ನು ಹೇಳಲೇಬೇಕು. ಇದು ನಿಮ್ಮ ಆಡಳಿತದ ಇಚ್ಛೆಯಾಗಿದೆ. ನಾವು ಇಷ್ಟ ಪಡದ ದಾರಿಯಲ್ಲಿ ಸಾಗಲು ನೀವು ನಮ್ಮನ್ನು ಒತ್ತಾಯಿಸುತ್ತಿದ್ದೀರಿ ಮತ್ತು ನಾವು ಪೂರ್ಣ ಕಠಿಣತೆಯೊಂದಿಗೆ ಪ್ರತಿಕ್ರಿಯಿಸಬೇಕಾಗುತ್ತದೆ’ ಎಂದು ಹೇಳಿತು.
‘ಒಂದು ನ್ಯಾಯಾಲಯವಾಗಿ ಪಠ್ಯಪುಸ್ತಕಗಳು, ಸಮವಸ್ತ್ರಗಳು ಇತ್ಯಾದಿಗಳ ವಿತರಣೆ ನಮ್ಮ ಕೆಲಸವಲ್ಲ. ಯಾರೋ ಒಬ್ಬರು ತಮ್ಮ ಕೆಲಸವನ್ನು ಮಾಡಲು ವಿಫಲಗೊಂಡಿರುವುದರಿಂದ ನಾವಿದನ್ನು ಮಾಡುತ್ತಿದ್ದೇವೆ. ನಿಮ್ಮ ಕಕ್ಷಿದಾರರು ಅಧಿಕಾರದಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ ’ ಎಂದೂ ಪೀಠವು ಹೇಳಿತು.
ಕೇಜ್ರಿವಾಲ್ ರಾಷ್ಟ್ರೀಯ ಹಿತಾಸಕ್ತಿಗಿಂತ ತನ್ನ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ : ದಿಲ್ಲಿ ಹೈಕೋರ್ಟ್
ಸ್ಥಾಯಿ ಸಮಿತಿಯ ರಚನೆಯಾಗದಿರುವುದರಿಂದ ಎಂಸಿಡಿಯ ಕಾರ್ಯವು ಸ್ಥಗಿತಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆಪ್, ಈ ವಿಷಯವು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಾಗಿದೆ. ಲೆಫ್ಟಿನಂಟ್ ಗವರ್ನರ್ ನಾಮ ನಿರ್ದೇಶಿತ ಕೌನ್ಸಿಲರ್ಗಳನ್ನು ನೇಮಿಸಿದ್ದಾರೆ. ಪರಿಣಾಮವಾಗಿ ಸ್ಥಾಯಿ ಸಮಿತಿ ರಚನೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.