ಸಚಿವ ಕೈಲಾಶ್ ಗಹ್ಲೋಟ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ , ಕೈಲಾಶ್ ಗಹ್ಲೋಟ್ | PC : ANI
ಹೊಸದಿಲ್ಲಿ: ಎಎಪಿ ಪಕ್ಷಕ್ಕೆ ಸಚಿವ ಕೈಲಾಶ್ ಗಹ್ಲೋಟ್ ರಾಜೀನಾಮೆ ನೀಡಿರುವ ಕುರಿತು ಪ್ರಶ್ನೆಗೆ ಉತ್ತರಿಸಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರವಿವಾರ ನಿರಾಕರಿಸಿದ್ದಾರೆ.
ಮಾಜಿ ಬಿಜೆಪಿ ಶಾಸಕ ಅನಿಲ್ ಝಾ ಅವರನ್ನು ಎಎಪಿ ಪಕ್ಷಕ್ಕೆ ಸ್ವಾಗತಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಗೆ ಗಹ್ಲೋಟ್ ಅವರ ಅನಿರೀಕ್ಷಿತ ರಾಜೀನಾಮೆ ಬಗ್ಗೆ ಪತ್ರಕರ್ತರು ಪ್ರಶ್ನೆಯನ್ನು ಕೇಳಿದ್ದಾರೆ. ಈ ವೇಳೆ ಅರವಿಂದ್ ಕೇಜ್ರಿವಾಲ್ ತಕ್ಷಣವೇ ಮೈಕನ್ನು ತಮ್ಮ ಪಕ್ಕದಲ್ಲಿ ಕುಳಿತಿದ್ದ ಪಕ್ಷದ ಹಿರಿಯ ನಾಯಕ ದುರ್ಗೇಶ್ ಪಾಠಕ್ ಕಡೆಗೆ ತಿರುಗಿಸಿದ್ದಾರೆ. ಪತ್ರಕರ್ತರು ಕೇಜ್ರಿವಾಲ್ ಅವರಲ್ಲಿ ಮತ್ತೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಕೇಜ್ರಿವಾಲ್ ನಗುತ್ತಾ, ನಿಮಗೆ ಉತ್ತರ ಬೇಕು, ಅಲ್ವ ಎಂದು ಕೇಳಿ ಬಿಜೆಪಿಯನ್ನು ಟೀಕಿಸಿದ್ದಾರೆ. ಆದರೆ ಗಹ್ಲೋಟ್ ಅವರ ರಾಜೀನಾಮೆ ಬಗ್ಗೆ ಉಲ್ಲೇಖಿಸಿಲ್ಲ.
ಕೈಲಾಶ್ ಗಹ್ಲೋಟ್ ಅವರ ಮೇಲೆ ನಿರಂತರವಾಗಿ ಐಟಿ ಮತ್ತು ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ದರಿಂದ ಅವರಿಗೆ ಬೇರೆ ಆಯ್ಕೆ ಇರಲಿಲ್ಲ. ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎಂಬುವುದನ್ನು ಇದು ಸ್ಪಷ್ಟಪಡಿಸುತ್ತದೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ, ಅವರು ಈಡಿ, ಸಿಬಿಐ ಮತ್ತು ಐಟಿ ಮೂಲಕ ಹೋರಾಡುತ್ತಿದ್ದಾರೆ. ನಾವು ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ ಎಂದು ದುರ್ಗೇಶ್ ಹೇಳಿದ್ದಾರೆ.
ಇದಕ್ಕೂ ಮೊದಲು ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತನಾಡುತ್ತಾ, ಗಹ್ಲೋಟ್ ಅವರ ರಾಜೀನಾಮೆಯು ಬಿಜೆಪಿಯ ಕೊಳಕು ರಾಜಕೀಯದ ಭಾಗವಾಗಿದೆ. ಈಡಿ-ಸಿಬಿಐ ದಾಳಿಗಳ ಮೂಲಕ ಕೈಲಾಶ್ ಗಹ್ಲೋಟ್ ಮೇಲೆ ಒತ್ತಡ ಹೇರಲಾಗುತ್ತಿತ್ತು, ಈಗ ಅವರು ಬಿಜೆಪಿಯ ಸ್ಕ್ರಿಪ್ಟ್ ಪ್ರಕಾರ ಮಾತನಾಡುತ್ತಿದ್ದಾರೆ. ದಿಲ್ಲಿ ಚುನಾವಣೆಗೆ ಮುಂಚಿತವಾಗಿ ಮೋದಿಯ ವಾಷಿಂಗ್ ಮೆಷಿನ್ ಸಕ್ರಿಯಗೊಳಿಸಲಾಗಿದೆ. ಈ ಮೂಲಕ ಅನೇಕ ನಾಯಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಅವರು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.