ನಾಳೆ ದಿಲ್ಲಿ ಲೆಫ್ಟಿನಂಟ್ ಗವರ್ನರ್ ಜೊತೆ ಕೇಜ್ರಿವಾಲ್ ಭೇಟಿ | ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಸಾಧ್ಯತೆ
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಅಪರಾಹ್ನ 4:30ಕ್ಕೆ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾರನ್ನು ಭೇಟಿಯಾಗಲಿದ್ದು, ಈ ಸಂದರ್ಭ ಅವರು ತನ್ನ ರಾಜೀನಾಮೆಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ನಾವು ಪ್ರಾಮಾಣಿಕರು ಎಂದು ಜನರು ಹೇಳಿದಾಗ ಮಾತ್ರ ನಾನು ಮುಖ್ಯಮಂತ್ರಿಯಾಗುತ್ತೇನೆ ಮತ್ತು ಮನೀಷ್ ಸಿಸೋದಿಯಾ ಉಪ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಕೇಜ್ರಿವಾಲ್ ಈ ಮೊದಲು ಹೇಳಿದ್ದರು.
ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನಿನಲ್ಲಿ ತಿಹಾರ ಜೈಲಿನಿಂದ ಬಿಡುಗಡೆಗೊಂಡಿರುವ ಕೇಜ್ರಿವಾಲ್, 48 ಗಂಟೆಗಳಲ್ಲಿ ತಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತೇನೆ ಮತ್ತು ದಿಲ್ಲಿಯಲ್ಲಿ ಶೀಘ್ರ ಚುನಾವಣೆಗಳನ್ನು ನಡೆಸುವಂತೆ ಕೇಳಿಕೊಳ್ಳುತ್ತೇನೆ ಎಂದು ರವಿವಾರ ಹೇಳಿದ್ದರು. ಜನರು ತನಗೆ ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ನೀಡುವವರೆಗೆ ತಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು.
ಎರಡು ದಿನಗಳಲ್ಲಿ ಆಪ್ ಶಾಸಕರ ಸಭೆಯನ್ನು ನಡೆಸುವುದಾಗಿ ಮತ್ತು ಪಕ್ಷದ ನಾಯಕರೋರ್ವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದೂ ಅವರು ಹೇಳಿದ್ದರು.