ಕೇಜ್ರಿವಾಲ್ ಬಂಧನದಿಂದ ಒಂದು ವರ್ಷದಿಂದ ನಡೆಯುತ್ತಿರುವ ನಾಟಕದ ಅಂತ್ಯವಾಗಿದೆ : ಬಿಜೆಪಿ
Photo: PTI
ಹೊಸದಿಲ್ಲಿ : "2021 ರಿಂದ ದಿಲ್ಲಿಯಲ್ಲಿ ಮದ್ಯ ಹಗರಣ ಪ್ರಾರಂಭವಾಯಿತು. ದಲ್ಲಾಳಿಗಳು ಮತ್ತು ಮದ್ಯದ ಗುತ್ತಿಗೆದಾರರೊಂದಿಗೆ ಹೇಗೆ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬುದರ ಕುರಿತು ಒಂದರ ನಂತರ ಒಂದರಂತೆ ಬಹಿರಂಗಪಡಿಸಲಾಗಿದೆ. ಕೇಜ್ರಿವಾಲ್ ಅವರ ಬಂಧನವು ಒಂದು ವರ್ಷದಿಂದ ನಡೆಯುತ್ತಿರುವ ನಾಟಕದ ಅಂತ್ಯವನ್ನು ಸೂಚಿಸುತ್ತದೆ", ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಹೇಳಿದ್ದಾರೆ.
ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಕರೆಗಳ ನಡುವೆ, ಸಚ್ದೇವ ಈ ಹೇಳಿಕೆ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಕೇಜ್ರಿವಾಲ್ ಸರ್ಕಾರವನ್ನು ಜೈಲಿನಿಂದ ನಡೆಸುತ್ತಾರೆ ಎಂದು ಹೇಳುವ ಮೂಲಕ ಪಕ್ಷವು ಸಂವಿಧಾನವನ್ನು ಅವಮಾನಿಸುತ್ತಿದೆ. ದಿಲ್ಲಿ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
"ಕೇಜ್ರಿವಾಲ್ ಬಂಧನವು ದಿಲ್ಲಿಯ ಜನರಿಗೆ ತೃಪ್ತಿ ತಂದಿದೆ. ಕೇಜ್ರಿವಾಲ್ ಅವರು ಜೈಲಿನಿಂದ ಸರ್ಕಾರವನ್ನು ನಡೆಸುತ್ತಾರೆ ಎಂಬ ಎಎಪಿ ನಾಯಕರ ಹೇಳಿಕೆಯಿಂದ ಸಾಂವಿಧಾನಿಕ ನಿಯಮಗಳಿಗೆ ಅವಮಾನವಾಗಿದೆ. ಹೇಮಂತ್ ಸೊರೆನ್ ಕೂಡ ಅದೇ ಮಾತನ್ನು ಹೇಳಿದರು. ಆದರೆ ಬಂಧಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ದಿಲ್ಲಿಯಲ್ಲೂ ಇದೇ ರೀತಿ ಆಗಲಿದೆ" ಎಂದು ಅವರು ಹೇಳಿದರು.
ಕೇಜ್ರಿವಾಲ್ ಅವರ ಬಂಧನವನ್ನು ಪ್ರಜಾಪ್ರಭುತ್ವದ ಸಾವು ಎಂದು ಕರೆದಿದ್ದಕ್ಕಾಗಿ ಎಎಪಿಯನ್ನು ತರಾಟೆಗೆ ತೆಗೆದುಕೊಂಡ ಸಚ್ದೇವ, “ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ಎಲ್ಲರೂ ರಾಜಕೀಯ ಘೋಷಣೆ ಕೂಗುತ್ತಿದ್ದಾರೆ. ಇದು ರಾಜಕೀಯ ನಾಟಕವಲ್ಲದೆ ಮತ್ತೇನೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಸರ್ಕಾರವು ಸಾರ್ವಜನಿಕರಿಗೆ ಉತ್ತರದಾಯಿಯಾಗಿದೆ. ಸರ್ಕಾರವಿರುವುದು ಜನರನ್ನು ದೋಚಲಿಕ್ಕಲ್ಲ", ಎಂದು ಸಚ್ ದೇವ ಹೇಳಿದರು.
“ಇದು ಮದ್ಯದ ಹಗರಣವಾಗಿದ್ದು, ಪ್ರಕರಣವು ಎಲ್ಲಾ ನ್ಯಾಯಾಲಯಗಳ ಕದ ತಟ್ಟಿದೆ. ಎಲ್ಲಾ ತನಿಖಾ ಸಂಸ್ಥೆಗಳು ತನಿಖೆ ನಡೆಸಿದೆ. ನಿಮ್ಮ ಅಬಕಾರಿ ನೀತಿ ತುಂಬಾ ಉತ್ತಮವಾಗಿದ್ದರೆ, ನೀವೇಕೆ ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ದೀರಿ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮದ್ಯದ ವ್ಯಾಪಾರದಲ್ಲಿ ಖಾಸಗಿಯವರಿಗೆ ಅವಕಾಶ ನೀಡುವುದರ ವಿರುದ್ಧ ನಿಮ್ಮದೇ ಸರ್ಕಾರದ ಇಲಾಖೆಯ ಸಲಹೆಯನ್ನು ನೀವೇಕೆ ಕಸದ ಬುಟ್ಟಿಗೆ ತಳ್ಳಿದಿರಿ?", ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.