ಖ್ಯಾತ ನಟರ ವಿರುದ್ಧ ದೂರು ದಾಖಲಿಸಿದ್ದ ಕೇರಳ ನಟಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ತಿರುವನಂತಪುರಂ : ತಾನು ಕಿರಿಯ ನಟಿಯಾಗಿದ್ದಾಗ ನನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಮಲಯಾಳಂನ ಖ್ಯಾತ ನಟರಾದ ಮುಕೇಶ್, ಜಯಸೂರ್ಯ, ಮನಿಯಾನ್ ಪಿಲ್ಲ ರಾಜು ಹಾಗೂ ಎಡವೆಲ ಬಾಬು ವಿರುದ್ಧ ದೂರು ದಾಖಲಿಸಿದ್ದ ಕೇರಳದ ನಟಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಆರೋಪಿ ನಟಿಯ ಸಂಬಂಧಿಯೊಬ್ಬರು ದಾಖಲಿಸಿರುವ ದೂರನ್ನು ಆಧರಿಸಿ ಮವಟ್ಟುಪುಳ ಪೊಲೀಸರು ಸೆಪ್ಟೆಂಬರ್ 20ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರ ಪ್ರಕಾರ, ತಾನು 16 ವರ್ಷ ವಯಸ್ಸಿನವಳಾಗಿದ್ದಾಗ ಆರೋಪಿ ನಟಿಯು ತನ್ನನ್ನು ಚೆನ್ನೈನ ಗುಂಪೊಂದಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದರು ಹಾಗೂ ತನ್ನನ್ನು ಲೈಂಗಿಕ ಕಾರ್ಯಕರ್ತೆ ಕೆಲಸಕ್ಕೆ ದೂಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಆರೋಪಿ ನಟಿಯು ಲೈಂಗಿಕ ಜಾಲವನ್ನೂ ನಡೆಸುತ್ತಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದಾರೆ.
ಈ ದೂರನ್ನು ಆಧರಿಸಿ ಆರೋಪಿ ನಟಿಯ ವಿರುದ್ಧ ಪೊಕ್ಸೊ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.