ವಯನಾಡ್ ಸುರಂಗ ಮಾರ್ಗ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇರಳ ಪರಿಸರ ಸಮಿತಿ : ಹೆಚ್ಚಿನ ವಿವರಕ್ಕೆ ಕೋರಿಕೆ
ಸಾಂದರ್ಭಿಕ ಚಿತ್ರ | PC : PTI
ತಿರುವನಂತಪುರಂ : ಕೇರಳ ಸರಕಾರದ ಮಹತ್ವಾಕಾಂಕ್ಷಿ ವಯನಾಡ್ ಅವಳಿ ಸುರಂಗ ಮಾರ್ಗ ಯೋಜನೆ ಮತ್ತೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದು, ಕೇರಳ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ಈ ಯೋಜನೆಯಿಂದ ಪರಿಸರದ ಮೇಲಾಗಲಿರುವ ಪರಿಣಾಮದ ಕುರಿತು ಮತ್ತಷ್ಟು ವಿವರಗಳನ್ನು ಒದಗಿಸುವಂತೆ ಕೋರಿದೆ.
ಇತ್ತೀಚೆಗೆ 300ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಮುಂಡಕ್ಕೈ-ಚೂರಲ್ಮಲ ಭೂಕುಸಿತದ ಹಿನ್ನೆಲೆಯಲ್ಲಿ ಸಮಿತಿ ಈ ನಿಲುವು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ವಯನಾಡ್ ನ ಮೆಪ್ಪಾಡಿಯಿಂದ ಕೋಯಿಕ್ಕೋಡ್ ನ ಅನಕ್ಕಂಪೋಯಿಲ್ ವರೆಗಿನ 8.7 ಕಿಮೀ ದೂರದ ಪ್ರಸ್ತಾವಿತ ಅವಳಿ ಸುರಂಗ ಮಾರ್ಗವು ಜುಲೈ 30ರಂದು ಸಂಭವಿಸಿದ್ದ ಮುಂಡಕ್ಕೈ-ಚೂರಲ್ಮಲ ಪ್ರದೇಶದಿಂದ ಕೇವಲ 4 ಕಿಮೀ ದೂರವಿದ್ದರೆ, 2019ರಲ್ಲಿ ಪುತ್ತುಮಲದಲ್ಲಿ ಸಂಭವಿಸಿದ್ದ ಭೂಕುಸಿತ ಪ್ರದೇಶದಿಂದ ಕೇವಲ 0.85 ಕಿಮೀ ದೂರವಿದೆ.
ಕೇರಳ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಗೆ ರಾಜ್ಯ ಸರಕಾರವು 28 ಹೆಚ್ಚುವರಿ ವಿವರಗಳನ್ನು ಒದಗಿಸಿದ್ದರೂ, ಯೋಜನೆಯಿಂದಾಗಬಹುದಾದ ಪರಿಸರದ ಮೇಲಿನ ದುಷ್ಪರಿಣಾಮದ ಕುರಿತು ಸಮಿತಿಗೆ ಇನ್ನೂ ಸಂಶಯವಿದೆ. ಹೀಗಾಗಿ, ಅನುಮತಿಯನ್ನು ನೀಡಲು ಮತ್ತಷ್ಟು ವಿವರಗಳನ್ನು ಸಮಿತಿ ಕೋರಿದೆ ಎನ್ನಲಾಗಿದೆ.
ನವೆಂಬರ್ 4 ಹಾಗೂ 6ರಂದು ಸಭೆ ನಡೆಸಿದ್ದ ಕೇರಳ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು, ಈ ವಿಷಯವನ್ನು ಪರಿಗಣಿಸಿ, ಸುರಂಗ ಕಾಮಗಾರಿಯಿಂದ ಪರಿಸರದ ಮೇಲಾಗುವ ಗರಿಷ್ಠ ಪ್ರಮಾಣದ ಪರಿಣಾಮದ ಕುರಿತು ಮತ್ತಷ್ಟು ವಿವರಗಳನ್ನು ಒದಗಿಸುವಂತೆ ಯೋಜನೆಯ ಉಸ್ತುವಾರಿಯಾದ ರಾಜ್ಯ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿತ್ತು. ಇದರೊಂದಿಗೆ ಇಂಗಾಲದ ಹೊರಸೂಸುವಿಕೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತೂ ವಿವರಗಳನ್ನು ಕೋರಿತ್ತು.
ಸುರಂಗ ಮಾರ್ಗ ಯೋಜನೆಯ ಬಗ್ಗೆ ಕೇರಳ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ಮತ್ತಷ್ಟು ಸ್ಪಷ್ಟನೆಗಳನ್ನು ಕೋರಿದ್ದು, ಅವುಗಳನ್ನು ಶೀಘ್ರವೇ ಒದಗಿಸಲಾಗುವುದು. ಇದು ಸಹಜ ರೀತಿ-ರಿವಾಜಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕೋಯಿಕ್ಕೋಡ್ ರಸ್ತೆಗಳ ವಲಯದ ಕಾರ್ಯಕಾರಿ ಎಂಜಿನಿಯರ್ ತಿಳಿಸಿದ್ದಾರೆ ಎಂದು Deccan Herald ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಯನಾಡ್ ನ ಜನಪ್ರಿಯ ತಾಮರಸ್ಸೆರಿ ಘಾಟ್ ರಸ್ತೆಯಲ್ಲಿನ ವಾಹನ ದಟ್ಟಣೆಗಳನ್ನು ತಗ್ಗಿಸುವ ಕ್ರಮದ ಭಾಗವಾಗಿ 1,600 ಕೋಟಿ ರೂಪಾಯಿ ವೆಚ್ಚದ ಈ ಸುರಂಗ ಮಾರ್ಗವನ್ನು ಯೋಜಿಸಲಾಗಿದೆ. ಆದರೆ, ಅಸ್ತಿತ್ವದಲ್ಲಿರುವ ಘಾಟ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬದಲು, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರಾಂತ್ಯಗಳಲ್ಲಿ ನೂತನವಾಗಿ ಸುರಂಗ ಮಾರ್ಗ ನಿರ್ಮಿಸಬೇಕಾದ ಅಗತ್ಯದ ಕುರಿತು ಪರಿಸರವಾದಿಗಳು ರಾಜ್ಯ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.