ಕೇರಳ | ಮಸೀದಿಯ ವಾರ್ಷಿಕ ಉತ್ಸವದಲ್ಲಿ ಆನೆ ದಾಂಧಲೆ ; 20ಕ್ಕೂ ಅಧಿಕ ಮಂದಿಗೆ ಗಾಯ
PC : NDTV
ಮಲಪ್ಪುರಂ: ಮಲಪ್ಪುರಂನ ಮಸೀದಿಯೊಂದರ ವಾರ್ಷಿಕ ಉತ್ಸವದ ಸಂದರ್ಭ ಆನೆಯೊಂದು ದಾಂಧಲೆ ನಡೆಸಿದ ಪರಿಣಾಮ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಸೀದಿಯ ವಾರ್ಷಿಕ ಉತ್ಸವದ ಪುದಿಯಂಗಾಡಿ ಆಚರಣೆ ಸಂದರ್ಭ ಬಿಪಿ ಅಂಗಾಡಿ ಜಾರಮ್ ಮೈದಾನದಲ್ಲಿ ಮುಂಜಾನೆ ಸುಮಾರು 12.30ಕ್ಕೆ ಈ ಘಟನೆ ಸಂಭವಿಸಿದೆ.
ಆಚರಣೆಯ ಸಂದರ್ಭ ಪಕಾಥ್ ಶ್ರೀಕುಟ್ಟನ್ ಹೆಸರಿನ ಆನೆ ವ್ಯಗ್ರಗೊಂಡು ವ್ಯಕ್ತಿಯೋರ್ವನನ್ನು ದಂತದಿಂದ ಎತ್ತಿ ದೂರ ಎಸೆಯಿತು. ಇದರಿಂದ ಆತ ಗಂಭೀರ ಗಾಯಗೊಂಡ. ಆತನನ್ನು ಕೊಟ್ಟಕ್ಕಾಲದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ಸಂದರ್ಭ ಉಂಟಾದ ಕಾಲ್ತುಳಿತದಂತಹ ಸನ್ನಿವೇಶದಿಂದ ಹಲವರು ಗಾಯಗೊಂಡರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಉತ್ಸವದ ಅಲಂಕಾರದೊಂದಿಗೆ ಬೆಳಗುತ್ತಿರುವ ಮಸೀದಿಯ ಹೊರಗೆ ಸುವರ್ಣ ತಲೆ ಪಟ್ಟಿಯಿಂದ ಅಲಂಕರಿಸಲಾದ ಐದು ಆನೆಗಳು ನಿಂತಿರುವುದು, ಇವುಗಳಲ್ಲಿ ಒಂದು ಆನೆ ಇದ್ದಕ್ಕಿದ್ದಂತೆ ವ್ಯಗ್ರವಾಗುವುದು ಹಾಗೂ ಜನಸಂದಣಿಯ ನಡುವೆ ನುಗ್ಗುವುದು, ಇದರಿಂದ ಮೈದಾನದಲ್ಲಿ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿರುವುದು ಕಂಡು ಬಂದಿದೆ. ಈ ವಾರ್ಷಿಕ ಉತ್ಸವದಲ್ಲಿ ಕಾಲ್ತುಳಿತದಿಂದ ಹೆಚ್ಚಿನವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಆನೆ ದಂತದಿಂದ ವ್ಯಕ್ತಿಯೋರ್ವನನ್ನು ಎತ್ತಿ ಎಸೆಯುತ್ತಿರುವ ನಡುವೆಯೂ ಮಾವುತ ಆನೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಕೊನೆಗೂ ಮುಂಜಾನೆ 2.15ಕ್ಕೆ ಮಾವುತ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಆಲೂರು ವಲಿಯ ಪೂಕುಂಞಿಕೋಯಾ ತಂಙಳ್ ಅವರ ನೆನಪಿಗಾಗಿ ಈ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.