ಕೇರಳ: ಖ್ಯಾತ ಮೂತ್ರಪಿಂಡ ತಜ್ಞ ತೋಟದ ಮನೆಯಲ್ಲಿ ಆತ್ಮಹತ್ಯೆ

ಡಾ.ಜಾರ್ಜ್ ಪಿ.ಅಬ್ರಹಾಂ | PC : newsable.asianetnews.com
ಎರ್ನಾಕುಳಂ: ಖ್ಯಾತ ಮೂತ್ರಪಿಂಡ ತಜ್ಞ ಹಾಗೂ ಹಿರಿಯ ಶಸ್ತ್ರಚಿಕಿತ್ಸಕ ಡಾ.ಜಾರ್ಜ್ ಪಿ.ಅಬ್ರಹಾಂ(74) ಅವರು ಎರ್ನಾಕುಳಂ ಜಿಲ್ಲೆಯಲ್ಲಿನ ತನ್ನ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೊಚ್ಚಿಯ ಪ್ರಮುಖ ಖಾಸಗಿ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದಲ್ಲಿ ಸೀನಿಯರ್ ಸರ್ಜನ್ ಆಗಿದ್ದ ಡಾ.ಅಬ್ರಹಾಂ ಅವರು ರವಿವಾರ ಸಂಜೆ ತನ್ನ ಸೋದರನ ಜೊತೆ ನೆಡುಂಬಶ್ಶೇರಿ ಸಮೀಪದ ಥುರುಥಿಶ್ಶೇರಿಯಲ್ಲಿನ ತೋಟದ ಮನೆಗೆ ತೆರಳಿದ್ದರು. ಬಳಿಕ ಸೋದರನನ್ನು ಬಿಟ್ಟು ಒಬ್ಬರೇ ಮರಳಿ ಬಂದಿದ್ದರು. ತಡರಾತ್ರಿ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳದಲ್ಲಿ ಆತ್ಮಹತ್ಯೆ ಚೀಟಿ ಪತ್ತೆಯಾಗಿದ್ದು,ವೈದ್ಯಕೀಯ ವೃತ್ತಿಯನ್ನು ಹಿಂದಿನಂತೆ ಮುಂದುವರಿಸಲು ತನಗೆ ಕಷ್ಟವಾಗುತ್ತಿದೆ ಎಂದು ಅದರಲ್ಲಿ ಬರೆದಿದ್ದಾರೆ. ಆರು ತಿಂಗಳುಗಳ ಹಿಂದೆ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು,ನಂತರ ಅವರ ಕೈಗಳು ನಡುಗುತ್ತಿದ್ದವು ಎಂದು ವರದಿಗಳು ಸೂಚಿಸಿವೆ.
ಮೂತ್ರಪಿಂಡ ಕಸಿಯಲ್ಲಿ ಪ್ರವರ್ತಕರಾಗಿದ್ದ ಡಾ.ಅಬ್ರಹಾಂ ಕಳೆದ 25 ವರ್ಷಗಳಲ್ಲಿ 2,500ಕ್ಕೂ ಅಧಿಕ ಮೂತ್ರಪಿಂಡ ಕಸಿಗಳನ್ನು ಮಾಡಿದ್ದಾರೆ.
ಆಸ್ಪತ್ರೆಯ ದಾಖಲೆಗಳ ಪ್ರಕಾರ ಅವರು ಲ್ಯಾಪ್ರೋಸ್ಕೋಪಿಕ್ ವಿಧಾನದ ಮೂಲಕ ಜೀವಂತ ದಾನಿಯ ಮೂತ್ರಪಿಂಡವನ್ನು ಪ್ರತ್ಯೇಕಿಸಿದ್ದ ವಿಶ್ವದ ಮೂರನೇ ಸರ್ಜನ್ ಆಗಿದ್ದರು.
ಅವರು 3ಡಿ ಲಾಪ್ರೋಸ್ಕೋಪಿಯನ್ನು ಬಳಸಿ ಕೇರಳದ ಮೊದಲ ಕ್ಯಾಡೆವರ್ ಕಸಿ, ಪರ್ಕುಟ್ಯೇನಿಯಸ್ ನೆಫ್ರಾಲಿಥೋಟಮಿ(ಪಿಸಿಎನ್ಎಲ್) ಯನ್ನು ಮಾಡಿದ್ದರು.
ಡಾ.ಅಬ್ರಹಾಂ ಅವರ ಸಾವು ಮತ್ತು ಆತ್ಮಹತ್ಯೆ ಚೀಟಿ ಕುರಿತು ತನಿಖೆ ಪ್ರಗತಿಯಲ್ಲಿದೆ.