ಕೇರಳ: ಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು

ಸಾಂದರ್ಭಿಕ ಚಿತ್ರ | PC : PTI
ಆಲಪ್ಪುಳ : ಆಲಪ್ಪುಳ ಸಮೀಪದ ಕಾಯಂಕುಳಂನಲ್ಲಿ ರವಿವಾರ ಭತ್ತದ ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭ ಗಂಟಲಿನಲ್ಲಿ ಮೀನು ಸಿಕ್ಕಿ ಹಾಕಿಕೊಂಡು ಯುವಕನೋರ್ವ ಮೃತಪಟ್ಟಿದ್ದಾನೆ.
ಮೃತಪಟ್ಟ ಯುವಕನನ್ನು ಪುದುಪಳ್ಳಿಯ ಆದರ್ಶ್ ಆಲಿಯಾಸ್ ಉಣ್ಣಿ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೆಳೆಯರೊಂದಿಗೆ ಭತ್ತದ ಗದ್ದೆಯ ನೀರು ಆರಿಸಿ ಮೀನು ಹಿಡಿಯುತ್ತಿದ್ದ ಸಂದರ್ಭ ಸಂಜೆ 4.30ಕ್ಕೆ ಈ ಘಟನೆ ಸಂಭವಿಸಿದೆ. ಒಂದು ಮೀನನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಇನ್ನೊಂದು ಮೀನನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭ ಕಚ್ಚಿ ಹಿಡಿದುಕೊಂಡಿದ್ದ ಮೀನು ಬಾಯೊಳಗೆ ಹೋಗಿ ಗಂಟಲಿನಲ್ಲಿ ಸಿಲುಕಿಕೊಂಡಿತು ಎಂದು ಅವರು ತಿಳಿಸಿದ್ದಾರೆ.
ಆದರ್ಶ್ನನ್ನು ಕೂಡಲೇ ಒಚಿರಾದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಯ ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ