ಕೇರಳ | ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಅರ್ಚಕನಿಗೆ 20 ವರ್ಷಗಳ ಕಠಿಣ ಶಿಕ್ಷೆ
ಸಾಂದರ್ಭಿಕ ಚಿತ್ರ
ತಿರುವನಂತಪುರ : ಏಳು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾದ ದೇವಾಲಯವೊಂದರ 24 ವರ್ಷದ ಅರ್ಚಕನಿಗೆ ಇಲ್ಲಿನ ತ್ವರಿತ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2022 ಫೆಬ್ರವರಿಯಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತಿರುವಲ್ಲಂನ ನಿವಾಸಿಯಾಗಿರುವ ಈ ಅರ್ಚಕನಿಗೆ ನ್ಯಾಯಮೂರ್ತಿ ಆರ್. ರೇಖಾ ಅವರು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದರು.
ಬಾಲಕನ ದೂರದ ಸಂಬಂಧಿಯಾಗಿರುವ ಅರ್ಚಕ ಬಾಲಕನ ಮನೆಯ ಹತ್ತಿರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಬಾಲಕನ ಅಜ್ಜ ಅರ್ಚಕನಿಗೆ ಆಚರಣೆ ಹಾಗೂ ಪ್ರಾರ್ಥನೆಯನ್ನು ಕಲಿಸಿದ್ದರು. ಆದುದರಿಂದ ತಮ್ಮ ಮನೆಯ ಪಕ್ಕದಲ್ಲೇ ಬಾಡಿಗೆ ಮನೆ ಪಡೆಯಲು ಕುಟುಂಬ ಅರ್ಚಕನಿಗೆ ನೆರವು ನೀಡಿತ್ತು.
ಬಾಲಕ ಭೀತಿಯಿಂದ ಈ ಬಗ್ಗೆ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಆದರೆ, ಅರ್ಚಕ ಮತ್ತೆ ಮತ್ತೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದಾಗ ಆತ ತನ್ನ ತಂದೆಯ ಸಹೋದರಿಯಲ್ಲಿ ತಿಳಿಸಿದ್ದ. ಅನಂತರ ಬಾಲಕನ ಕುಟುಂಬ ಪೊಲೀಸರನ್ನು ಸಂಪರ್ಕಿಸಿ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಿತ್ತು.