NEET ಪರೀಕ್ಷೆಯನ್ನು ಕಳಪೆಯಾಗಿ ನಿರ್ವಹಿಸಿದ್ದಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
Photo credit: thenewsminute.com
ತಿರುವನಂತಪುರ: ನೀಟ್ ಮತ್ತು ನೆಟ್ ಪರೀಕ್ಷೆಯನ್ನು ಕಳಪೆಯಾಗಿ ನಿರ್ವಹಿಸಿದ್ದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕೇರಳ ರಾಜ್ಯ ವಿಧಾನಸಭೆ ಬುಧವಾರ ಅವಿರೋಧ ನಿರ್ಣಯ ಆಂಗೀಕರಿಸಿದೆ.
ಉನ್ನತ ಶಿಕ್ಷಣ ಸಚಿವರಾದ ಬಿ.ಬಿಂಧು ಈ ಸಂಬಂಧ ನಿರ್ಣಯ ಮಂಡಿಸಿ, ಆಗಿರುವ ಪ್ರಮಾದಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮತ್ತು ಮುಂದೆ ಇಂಥ ತಪ್ಪುಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮರ್ಪಕವಾಗಿ ನಡೆಯುತ್ತಿದ್ದ ರಾಜ್ಯಮಟ್ಟದ ಪರೀಕ್ಷೆಯನ್ನು ರದ್ದುಪಡಿಸಿದ ಬಳಿಕ ನೀಟ್ ಪರೀಕ್ಷೆಯನ್ನು ಆರಂಭಿಸಲಾಗಿದೆ. ಯಾವುದೇ ಲೋಪಗಳು ಇಲ್ಲದೇ ಪರೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಎನ್ಟಿಎ ಪದೇ ಪದೇ ತೋರಿಸಿಕೊಟ್ಟಿದೆ" ಎಂದು ಸಚಿವರು ವಿವರಿಸಿದರು.
ಎನ್ಟಿಎ ನಡೆಸಿದ ಪರೀಕ್ಷೆಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಖಂಡಿಸುವ ಮತ್ತೊಂದು ನಿರ್ಣಯವನ್ನು ಕೂಡಾ ವಿಧಾನಸಭೆ ಆಂಗೀಕರಿಸಿತು. ಎನ್ಡಿಎಫ್ ಶಾಸಕ ಎಂ.ವಿಜಿನ್ ಈ ನಿಲುವಳಿ ಸೂಚನೆ ಮಂಡಿಸಿದರು.