ಸಮಾನ ನಾಗರಿಕ ಸಂಹಿತೆ ವಿರೋಧಿಸಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Photo credit: Onmanorama)
ತಿರುವನಂತಪುರಂ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದರಿಂದ ಹಿಂದೆ ಸರಿಯಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕೇರಳ ವಿಧಾನಸಭೆ ಇಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ಈ ಹಿಂದೆ ಮಿಜೋರಾಂ ವಿಧಾನಸಭೆ ಕೂಡ ಫೆಬ್ರವರಿಯಲ್ಲಿ ಇಂತಹುದೇ ನಿರ್ಣಯ ಅಂಗೀಕರಿಸಿತ್ತು.
ಮಂಗಳವಾರ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಣಯ ಮಂಡಿಸಿದರಲ್ಲದೆ ಸಮಾನ ನಾಗರಿಕ ಸಂಹಿತೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಮತ್ತು ಅವಸರದಿಂದ ಜಾರಿಗೊಳಿಸಲು ಹೊರಟಿದೆ ಎಂದಿದ್ದಾರೆ. ಸಂಘ ಪರಿವಾರದ ನಿಲುವಿನ ಆಧಾರಿತ ಸಮಾನ ನಾಗರಿಕ ಸಂಹಿತೆಯು ದೇಶದ ಸಂವಿಧಾನದ ಅನುಸಾರವಾಗಿಲ್ಲ ಹಾಗೂ ಅದು ಹಿಂದುಗಳ ಮನುಸ್ಮೃತಿಯನ್ನು ಆಧರಿಸಿದೆ ಎಂದು ಅವರು ಆರೋಪಿಸಿದ್ದಾರೆ,
“ಇದನ್ನು ಸಂಘ ಪರಿವಾರವೇ ಬಹಳ ಹಿಂದೆ ಸ್ಪಷ್ಟಪಡಿಸಿದೆ. ಸಂವಿಧಾನದಲ್ಲಿರುವುದನ್ನು ಜಾರಿಗೊಳಿಸಲು ಅವರು ಯತ್ನಿಸುತ್ತಿಲ್ಲ,” ಎಂದು ವಿಜಯನ್ ಹೇಳಿದರು.
ಮುಸ್ಲಿಂ ವೈಯಕ್ತಿಕ ಕಾನೂನಿನಡಿಯ್ಲಲಿರುವ ವಿಚ್ಛೇದನ ಕ್ರಮವನ್ನು ಕೇಂದ್ರ ಅಪರಾಧೀಕರಣಗೊಳಿಸಿದೆ ಆದರೆ ಮಹಿಳೆಯರ ಸುರಕ್ಷತೆಗೆ ಕ್ರಮಕೈಗೊಂಡಿಲ್ಲ, ಎಂದು ಅವರು ಆರೋಪಿಸಿದರು.
ಕೇರಳದ ಎಡರಂಗ ಸರಕಾರದ ಕ್ರಮವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸ್ವಾಗತಿಸಿದೆ ಹಾಗೂ ನಿರ್ಣಯಕ್ಕೆ ಕೆಲವೊಂದು ತಿದ್ದುಪಡಿಗಳು ಮತ್ತು ಮಾರ್ಪಾಟುಗಳನ್ನು ಸೂಚಿಸಿದೆ. ಸೂಚಿಸಲಾದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮಗೊಳಿಸಲಾದ ನಿರ್ಣಯವನ್ನು ಮುಖ್ಯಮಂತ್ರಿ ಓದಿದರು.