ದ್ವೇಷ ಭಾಷಣ ಆರೋಪ: ಕೇರಳ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ವಿರುದ್ಧ ಪ್ರಕರಣ ದಾಖಲು
ಕೇರಳ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ | PTI
ಕೊಟ್ಟಾಯಂ: ದ್ವೇಷ ಭಾಷಣದ ಮೂಲಕ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ನಡೆದಿದ್ದ ಟಿವಿ ಚರ್ಚೆಯೊಂದರಲ್ಲಿ ಪಿ.ಸಿ.ಜಾರ್ಜ್ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಮುಸ್ಲಿಂ ಯೂತ್ ಲೀಗ್ ಮುನಿಸಿಪಲ್ ಕಮಿಟಿ ಸಲ್ಲಿಸಿದ ದೂರನ್ನು ಆಧರಿಸಿ ಶುಕ್ರವಾರ ಎರಟ್ಟುಪೆಟ್ಟ ಠಾಣೆ ಪೊಲೀಸರು ಬಿಜೆಪಿಯ ಹಿರಿಯ ನಾಯಕ ಪಿ.ಸಿ.ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರವೇ ಮುಂದಿನ ವಿಚಾರಣೆಗೆ ಚಾಲನೆ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಪಿ.ಸಿ.ಜಾರ್ಜ್ ರನ್ನು ಸಮರ್ಥಿಸಿಕೊಂಡಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಕೇರಳ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್, ನನ್ನ ಉದ್ದೇಶ ಭಯೋತ್ಪಾದನೆಯನ್ನು ವಿರೋಧಿಸುವುದಾಗಿತ್ತೇ ಹೊರತು, ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಳ್ಳುವುದಾಗಿರಲಿಲ್ಲ ಎಂದು ಪಿ.ಸಿ.ಜಾರ್ಜ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದ್ದಾರೆ.