ಕೇರಳ ಬಿಜೆಪಿ ನಾಯಕ ಸಂದೀಪ್ ವಾರಿಯರ್ ಕಾಂಗ್ರೆಸ್ ಗೆ ಸೇರ್ಪಡೆ
ಸಂದೀಪ್ ವಾರಿಯರ್ | PC : X
ತಿರುವನಂತಪುರಂ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ, ಬಿಜೆಪಿ ನಾಯಕ ಸಂದೀಪ್ ವಾರಿಯರ್ ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಸಂಗತಿಯನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯೂ ದೃಢಪಡಿಸಿದೆ.
ಬಿಜೆಪಿ ರಾಜ್ಯ ಸಮಿತಿಯ ಸದಸ್ಯರಾಗಿರುವ ಸಂದೀಪ್ ವಾರಿಯರ್, ಪಕ್ಷದೊಳಗೆ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಅತೃಪ್ತಿಯನ್ನು ಸಾರ್ವಜನಿಕವಾಗಿ ಹೊರಹಾಕಿದ್ದರು. ತಮ್ಮ ತಾಯಿ ಮೃತಪಟ್ಟು, ನಾನು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುವಾಗ ಬಿಜೆಪಿಯ ನಾಯಕರು ನನಗೆ ನೆರವು ನೀಡುವಲ್ಲಿ ವಿಫಲರಾದರು ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂದೀಪ್ ವಾರಿಯರ್ ಅವರ ಈ ನಡೆಯಿಂದ ಪಾಲಕ್ಕಾಡ್ ಉಪ ಚುನಾವಣಾ ಪ್ರಚಾರದಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡಿದೆ. ಕಾಂಗ್ರೆಸ್ ನಾಯಕತ್ವದೊಂದಿಗೆ ಎರಡು ವಾರಗಳ ಕಾಲ ನಡೆದ ತೀವ್ರ ಚರ್ಚೆಯ ನಂತರ, ಸಂದೀಪ್ ವಾರಿಯರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಈ ಬೆಳವಣಿಗೆಯ ಬಗ್ಗೆ ಬಲ್ಲ ಅವರ ಆಪ್ತ ಮೂಲಗಳು ತಿಳಿಸಿವೆ ಎಂದು TNM ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ಪಾಲಕ್ಕಾಡ್ ನಲ್ಲಿ ಆಯೋಜನೆಗೊಂಡಿದ್ದ ಬಿಜೆಪಿಯ ಚುನಾವಣಾ ಸಮಾವೇಶ ಕಾರ್ಯಕ್ರಮವೊಂದರಲ್ಲಿ ತಮಗೆ ಆಸನ ನಿರಾಕರಿಸಿದ್ದರಿಂದ ಕುಪಿತಗೊಂಡಿದ್ದ ಸಂದೀಪ್, ಅಲ್ಲಿಂದ ನಿರ್ಗಮಿಸಿದ್ದರು. ಅಲ್ಲಿಂದಾಚೆಗೆ ಅವರು ಬಿಜೆಪಿಯ ಯಾವುದೇ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ.
ಬಿಜೆಪಿಯ ಉನ್ನತ ನಾಯಕತ್ವವು ನನ್ನ ಸಮಸ್ಯೆಯನ್ನು ಕೇವಲ ಒಂದು ಕರೆಯ ಮೂಲಕ ಪರಿಹರಿಸಬಹುದಾಗಿತ್ತಾದರೂ, ಅವರು ಹಾಗೆ ಮಾಡಲಿಲ್ಲ ಎಂದು ಅವರು ಈ ಹಿಂದೆಯೂ ಸುದ್ದಿಗಾರರ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಗೆ ಸೇರ್ಪಡೆಯಾಗುವುದಕ್ಕೂ ಮುನ್ನ, ಅವರು ಸಿಪಿ(ಐ)ಎಂ ಅಥವಾ ಸಿಪಿಎಲ್ ಸೇರ್ಪಡೆಯಾಗುವ ಸಾಧ್ಯತೆಗಳ ಕುರಿತೂ ಪರಿಶೀಲಿಸಿದ್ದರು ಎಂದೂ ವರದಿಯಾಗಿದೆ. ಆದರೆ, ಜಾತ್ಯತೀತತೆ ಕುರಿತ ಸಂದೀಪ್ ವಾರಿಯರ್ ಅವರ ಈ ಹಿಂದಿನ ನಿಲುವುಗಳ ಕಾರಣಕ್ಕೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿಪಿ(ಐ)ಎಂ ಹಿಂಜರಿಕೆ ತೋರಿತು. ಹೀಗಾಗಿ ಈ ಕುರಿತ ಮಾತುಕತೆ ಫಲಪ್ರದವಾಗಲಿಲ್ಲ ಎಂದು ಹೇಳಲಾಗಿದೆ.