ಕೇರಳ:ಉದ್ಯಮಿ ಆತ್ಮಹತ್ಯೆ
ಬ್ಯಾಂಕಿನ ಕಿರುಕುಳ ಕಾರಣ: ಕುಟುಂಬದ ಆರೋಪ
ಸಾಂದರ್ಭಿಕ ಚಿತ್ರ.
ಕೊಟ್ಟಾಯಂ: ಇಲ್ಲಿಯ ಐಮನಂ ಸಮೀಪದ ಕುಡಯಂಪಾಡಿಯಲ್ಲಿ ಪಾದರಕ್ಷೆಗಳ ಅಂಗಡಿಯನ್ನು ನಡೆಸುತ್ತಿದ್ದ ವ್ಯಕ್ತಿ ಸೋಮವಾರ ಮಧ್ಯಾಹ್ನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಕರ್ನಾಟಕ ಮೂಲದ ಖಾಸಗಿ ಬ್ಯಾಂಕೊಂದರ ಸಿಬ್ಬಂದಿಗಳ ಕಿರುಕುಳ ಈ ದುರಂತಕ್ಕೆ ಕಾರಣವಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೃತ ಬಿನು ಕೆ.ಸಿ (50) ಇತ್ತೀಚಿಗೆ ಸದ್ರಿ ಬ್ಯಾಂಕಿನಿಂದ ಐದು ಲ.ರೂ.ಸಾಲ ಪಡೆದಿದ್ದರು. ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗಿದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಬ್ಯಾಂಕಿನ ಮ್ಯಾನೇಜರ್ ಎನ್ನಲಾಗಿರುವ ಪ್ರದೀಪ ತನ್ನ ತಂದೆಯ ಅಂಗಡಿಗೆ ಹೋಗಿ ಕಿರುಕುಳ ನೀಡುತ್ತಿದ್ದ ಮತ್ತು ಬೆದರಿಕೆಯೊಡ್ಡುತ್ತಿದ್ದ. ಇದರಿಂದಾಗಿ ತನ್ನ ತಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತರ ಪುತ್ರಿ ನಂದನಾ ಮಾಧ್ಯಮಗಳೆದುರು ಆರೋಪಿಸಿದರು.
ಬಿನು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ನಡುವೆ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಶವವನ್ನು ಬ್ಯಾಂಕ್ ಕಟ್ಟಡದ ಮುಂದೆ ಇರಿಸಿ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರು. ಪೊಲೀಸರಿಂದ ಮನವೊಲಿಕೆಯ ಬಳಿಕ ಅವರು ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಂಡರು