ಸಾಮ್ರಾಜ್ಯಶಾಹಿ ಅಮೆರಿಕವನ್ನು ಸಂತುಷ್ಟಗೊಳಿಸಲು ಫೆಲೆಸ್ತೀನ್ ಬದಲು ಇಸ್ರೇಲ್ ಅನ್ನು ಭಾರತ ಬೆಂಬಲಿಸುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಸಿಎಂ ಪಿಣರಾಯಿ ವಿಜಯನ್ | PC : PTI
ಕಣ್ಣೂರು: ಕೇವಲ ಸಾಮ್ರಾಜ್ಯಶಾಹಿ ಅಮೆರಿಕವನ್ನು ಸಂತುಷ್ಟಗೊಳಿಸಲು ಭಾರತವು ಫೆಲೆಸ್ತೀನ್ ಬದಲು ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರವಿವಾರ ಸಿ.ಎಚ್.ಕನರಾಮ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇಸ್ರೇಲ್ ಮತ್ತು ಭಾರತದಲ್ಲಿನ ಆಡಳಿತಾರೂಢ ಸರಕಾರವು ಅವಳಿ ಜವಳಿಗಳಾಗಿವೆ. ಒಬ್ಬರ ಹೆಸರು ಯೆಹೂದಿಯಾಗಿದ್ದರೆ, ಮತ್ತೊಬ್ಬರ ಹೆಸರು ಸಂಘ ಪರಿವಾರವಾಗಿದೆ. ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಹೇಳಿದರು ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಲೆಸ್ತೀನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ತಟಸ್ಥ ನಿಲುವು ತೆಗೆದುಕೊಂಡಿರುವ ಕೇಂದ್ರ ಸರಕಾರವನ್ನೂ ಪಿಣರಾಯಿ ವಿಜಯನ್ ಟೀಕಿಸಿದರು. ಫೆಲೆಸ್ತೀನ್ ಮೇಲಿನ ಯುದ್ಧವನ್ನು ಸ್ಥಗಿತಗೊಳಿಸುವಂತೆ ವಿಶ್ವ ಸಂಸ್ಥೆಯ ಬಹುತೇಕ ದೇಶಗಳು ಇಸ್ರೇಲ್ ಅನ್ನು ಆಗ್ರಹಿಸುವ ನಿರ್ಣಯ ಕೈಗೊಂಡರೂ, ಅಮೆರಿಕ ಸೇರಿದಂತೆ ಕೆಲವು ದೇಶಗಳು ಮಾತ್ರ ಆ ನಿರ್ಣಯವನ್ನು ವಿರೋಧಿಸಿದವು ಎಂಬುದರತ್ತ ಅವರು ಬೊಟ್ಟು ಮಾಡಿದರು. ಈ ವಿಷಯದ ಕುರಿತು ಭಾರತ ತೆಗೆದುಕೊಂಡಿರುವ ತಟಸ್ಥ ನಿಲುವಿನ ಕುರಿತು ಅವರು ಪ್ರಶ್ನಿಸಿದರು. “ವಿಶ್ವ ಸಂಸ್ಥೆಯ ನಿರ್ಣಯದ ಕುರಿತು ನಡೆದ ಮತದಾನದಿಂದ ನಾವು ದೂರ ಉಳಿದಿದ್ದೇವೆ. ನಾವು ಫೆಲೆಸ್ತೀನ್ ನೊಂದಿಗಿಲ್ಲ. ಫೆಲೆಸ್ತೀನ್ ಮೇಲಿನ ಯುದ್ಧವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸುತ್ತಿರುವ ಗುಂಪಿನೊಂದಿಗೂ ನಾವಿಲ್ಲ. ಇದರರ್ಥ, ನಾವು ಮತ್ತೊಂದು ಗುಂಪಿನ ಪರವಾಗಿದ್ದೇವೆ ಎಂದು” ಎಂದು ಅವರು ವಾಗ್ದಾಳಿ ನಡೆಸಿದರು.
ಇಟಲಿ ಸೇರಿದಂತೆ ಹಲವಾರು ದೇಶಗಳು ಇಸ್ರೇಲ್ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದರೂ, ಭಾರತ ಮಾತ್ರ ಹಾಗೆ ಮಾಡಿಲ್ಲ. ಭಾರತವು ಇಸ್ರೇಲ್ ನೊಂದಿಗೆ ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರ ವ್ಯವಹಾರವನ್ನು ನಡೆಸುತ್ತಿದ್ದು, ಭಾರತವು ಇಸ್ರೇಲ್ ಬಯಸುವ ಶಸ್ತ್ರಾಸ್ತ್ರಗಳನ್ನು ತಯಾರಿಸುವ ನೆಲವಾಗಿ ಮಾರ್ಪಟ್ಟಿದೆ ಎಂದು ಅವರು ಅಭಿಪ್ರಾಯ ಪಟ್ಟರು ಎಂದು ವರದಿಯಾಗಿದೆ.
ಫೆಲೆಸ್ತೀನ್ ನಲ್ಲಿರುವುದು ಯುದ್ಧದ ಪರಿಸ್ಥಿತಿಯಲ್ಲ, ಬದಲಿಗೆ ಜನಾಂಗೀಯ ಹತ್ಯೆ ಪರಿಸ್ಥಿತಿ ಎಂದು ಪುನರುಚ್ಚರಿಸಿದ ಪಿಣರಾಯಿ ವಿಜಯನ್, “ಮತ್ತೊಂದು ಗುಂಪಿನ ಬಳಿ ಸಾಕಷ್ಟು ಶಸ್ತ್ರಾಸ್ತ್ರವಿದ್ದಾಗ ಮಾತ್ರ, ಅದನ್ನು ಯುದ್ಧ ಎಂದು ಕರೆಯಬಹುದು. ಇದು ಒಮ್ಮುಖ ದಾಳಿಯಾಗಿದೆ. ಫೆಲೆಸ್ತೀನ್ ಅನ್ನು ನಾಶ ಮಾಡಲು ಇಸ್ರೇಲ್ ಬಯಸಿದ್ದು, ಅವರು ಎಲ್ಲ ಬಗೆಯ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ” ಎಂದು ಆರೋಪಿಸಿದರು.