ರಾಜ್ಯಪಾಲರು ಉದ್ದೇಶಪೂರ್ವಕವಾಗಿ ರಾಜ್ಯದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ: ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪ
Photo : twitter/pinarayivijayan
ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ರಾಜ್ಯ ಸರಕಾರದ ಜನಸಂಪರ್ಕ ಕಾರ್ಯಕ್ರಮ ‘ನವ ಕೇರಳ ಸದಸ್’ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಈ ಆರೋಪವನ್ನು ಮಾಡಿದರು.
ಪ್ರತಿಭಟನಾನಿರತ ಎಸ್ಎಫ್ಐ ಕಾರ್ಯಕರ್ತರನ್ನು ರಾಜ್ಯಪಾಲರು ‘ಕ್ರಿಮಿನಲ್ ಗಳು’ ಎಂದು ಬಣ್ಣಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ವಿಜಯನ್, ಖಾನ್ ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳುವ ಸ್ಥಿತಿಗೆ ತಲುಪಿದ್ದಾರೆ. ತಾನು ಕೇರಳದ ರಾಜ್ಯಪಾಲ ಎನ್ನುವುದನ್ನು ಅವರು ಮರೆಯುತ್ತಿದ್ದಾರೆ ಎಂದು ಹೇಳಿದರು.
ಖಾನ್ ತನ್ನ ಕ್ರಮಗಳ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಾನು ಹಿಂದೆಯೇ ಹೇಳಿದ್ದೆ ಮತ್ತು ಈ ಮಾತು ರಾಜ್ಯಪಾಲರ ನಂತರದ ಕ್ರಮಗಳಿಂದ ಸಾಬೀತಾಗಿದೆ ಎಂದ ವಿಜಯನ್, ಪ್ರತಿಯೊಂದೂ ವಿಷಯದಲ್ಲಿ ಗರಿಷ್ಠ ಸಂಭವನೀಯ ಪ್ರಚೋದನೆಯನ್ನು ಸೃಷ್ಟಿಸಲು ಅವರು (ಖಾನ್) ಪ್ರಯತ್ನಿಸಿದ್ದಾರೆ ಎಂದರು.
ಎಸ್ಎಫ್ಐನ ಪ್ರತಿಭಟನಾನಿರತ ಕಾರ್ಯಕರ್ತರನ್ನು ಕ್ರಿಮಿನಲ್ ಗಳು ಮತ್ತು ಗೂಂಡಾಗಳು ಎಂದು ಕರೆದಿದ್ದಕ್ಕಾಗಿ ಖಾನ್ರನ್ನು ಟೀಕಿಸಿದ ವಿಜಯನ್, ಪ್ರತಿಭಟನಾಕಾರರ ವಿರುದ್ಧ ಇಂತಹ ಒರಟು ಶಬ್ದಗಳನ್ನು ಅವರು ಬಳಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಎಸ್ಎಫ್ಐ ಕಾರ್ಯಕರ್ತರು ಗೂಂಡಾಗಳಾಗಿದ್ದಾರೆ ಮತ್ತು ತನ್ನ ನಿರ್ಧಾರಗಳ ಕುರಿತು ತಾನು ಅವರಿಗೆ ವಿವರಣೆಯನ್ನು ನೀಡಬೇಕಿಲ್ಲ ಎಂದು ಶನಿವಾರ ಹೇಳಿದ್ದ ರಾಜ್ಯಪಾಲ ಖಾನ್, ಪ್ರತಿಭಟನಾನಿರತ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳು ಬಾಡಿಗೆಗೆ ಪಡೆದಿರುವ ಕ್ರಿಮಿನಲ್ ಗಳಾಗಿದ್ದಾರೆ ಎಂದು ಆರೋಪಿಸಿದ್ದರು. ಈ ವಾರದ ಪೂರ್ವಾರ್ಧದಲ್ಲಿ ಅವರು ಮುಖ್ಯಮಂತ್ರಿಗಳು ತನಗೆ ದೈಹಿಕ ಹಾನಿಯನ್ನುಂಟು ಮಾಡಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ದಿಲ್ಲಿಗೆ ಪ್ರಯಾಣಿಸಲು ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಸಾಗುತ್ತಿದ್ದಾಗ ರಾಜ್ಯಪಾಲರ ಕಾರಿನ ಮೇಲೆ ಎಸ್ಎಫ್ಐ ಕಾರ್ಯಕರ್ತರೆನ್ನಲಾದ ಗುಂಪು ದಾಳಿ ನಡೆಸಿದ ಬಳಿಕ ಖಾನ್ ಈ ಅರೋಪವನ್ನು ಮಾಡಿದ್ದರು.
ರವಿವಾರ ಈ ಘಟನೆಯನ್ನು ಪ್ರಸ್ತಾಪಿಸಿದ ವಿಜಯನ್ ಪ್ರತಿಭಟನಾಕಾರರೊಂದಿಗೆ ಸಂಘರ್ಷಕ್ಕೆ ಪ್ರಯತ್ನಿಸಿದ್ದಕ್ಕಾಗಿ ಖಾನ್ ರನ್ನು ಟೀಕಿಸಿದರು.
ತಮ್ಮತ್ತ ಕಪ್ಪು ಬಾವುಟಗಳನ್ನು ಬೀಸುತ್ತಿರುವವರ ಜೊತೆ ದೈಹಿಕವಾಗಿ ಮುಖಾಮುಖಿಯಾಗಲು ಯಾರಾದರೂ ಎಂದಾದರೂ ಪ್ರಯತ್ನಿಸಿದ್ದಾರೆಯೇ? ಅದನ್ನು ಪೋಲಿಸರಿಗೆ ಬಿಡುತ್ತಾರೆ ಮತ್ತು ತಮ್ಮ ಪಾಡಿಗೆ ತಾವು ಮುಂದಕ್ಕೆ ಸಾಗುತ್ತಾರೆ. ತಾನು ಪ್ರತಿಭಟನಾಕಾರರತ್ತ ಸಾಗಿದಾಗ ಅವರು ಅಲ್ಲಿಂದ ಓಡಿ ಹೋದರು ಎಂದು ಖಾನ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಗಳು ಹೇಗೆ ಪ್ರಚೋದನಕಾರಿಯಾಗಿವೆ ನೋಡಿ. ಅವರ ಕ್ರಮಗಳು ಮತ್ತು ಮಧ್ಯಪ್ರವೇಶಗಳು ಸಾಮಾನ್ಯ ಜ್ಞಾನವನ್ನೇ ಕಳೆದುಕೊಂಡಿವೆ ಎಂದ ವಿಜಯನ್, ರಾಜ್ಯಪಾಲರ ಕ್ರಮಗಳು ಎಲ್ಲ ಸಾಮಾನ್ಯ ಶಿಷ್ಟಾಚಾರಗಳನ್ನು ಉಲ್ಲಂಘಿಸಿವೆ. ಕೇಂದ್ರ ಸರಕಾರವು ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ರಾಜ್ಯಪಾಲರು ರಾಜ್ಯದಲ್ಲಿಯ ವಿವಿಗಳ ಕುಲಾಧಿಪತಿಯಾಗಿ ತನ್ನ ಅಧಿಕಾರವನ್ನು ಬಳಸಿ ವಿವಿಧ ವಿವಿಗಳ ಸೆನೆಟ್ ಗಳಿಗೆ ಬಿಜೆಪಿ-ಆರೆಸ್ಸೆಸ್ ನಾಮನಿರ್ದೇಶಿತರ ನೇಮಕಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿ ಎಸ್ಎಫ್ಐ ಅವರ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆಸುತ್ತಿದೆ.