ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಸ್ಟಾಲಿನ್ ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬೆಂಬಲ

ಪಿಣರಾಯಿ ವಿಜಯನ್ , ಎಂ.ಕೆ.ಸ್ಟಾಲಿನ್ | PTI
ತಿರುವನಂತಪುರ: ಪ್ರಸ್ತಾವಿತ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವಿರುದ್ಧ ತಮಿಳುನಾಡು ಸರಕಾರದ ಹೋರಾಟಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಂಬಲವನ್ನು ಘೋಷಿಸಿದ್ದಾರೆ.
ಕ್ಷೇತ್ರ ಪುನವಿಂಗಡಣೆ ವಿರುದ್ಧ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಾ.7ರಂದು ಕೇರಳ,ಆಂಧ್ರಪ್ರದೇಶ, ತೆಲಂಗಾಣ,ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಪಂಜಾಬಿನ ನಾಯಕರಿಗೆ ಕರೆ ನೀಡಿದ್ದರು. ಮಾ.22ರಂದು ಚೆನ್ನೈನಲ್ಲಿ ನಡೆಯಲಿರುವ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಳ್ಳುವಂತೆಯೂ ಅವರು ಈ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ತಮಿಳುನಾಡಿನ ಐಟಿ ಮತ್ತು ಡಿಜಿಟಲ್ ಸೇವೆಗಳ ಸಚಿವ ಪಳನಿವೇಲ್ ತ್ಯಾಗರಾಜನ್ ಮತ್ತು ದಕ್ಷಿಣ ಚೆನ್ನೈ ಸಂಸದ ಟಿ.ತಂಗಪಾಂಡಿಯನ್ ಅವರು ತನ್ನನ್ನು ಭೇಟಿಯಾಗಿ ಸಮಿತಿಯ ಸಭೆಗೆ ಆಹ್ವಾನಿಸಿದ್ದಾರೆ ಎಂದು ಶುಕ್ರವಾರ ತಿಳಿಸಿರುವ ವಿಜಯನ್, ಈ ಪ್ರಮುಖ ವಿಷಯದಲ್ಲಿ ಒಗ್ಗಟ್ಟಾಗಿ ನಿಲ್ಲೋಣ ಎಂದು ಟ್ವೀಟಿಸಿದ್ದಾರೆ.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯಿಂದ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವ ರಾಜ್ಯಗಳು ಈ ಏಕಪಕ್ಷೀಯ ಕ್ರಮವನ್ನು ವಿರೋಧಿಸಲು ಒಟ್ಟಾಗುತ್ತಿವೆ, ಈ ಪ್ರಕ್ರಿಯೆಯು ಪ್ರಜಾಪ್ರಭುತ್ವ ಮತ್ತು ಒಕ್ಕೂಟವಾದದ ಮೌಲ್ಯಗಳನ್ನು ಗಾಳಿಗೆ ತೂರುತ್ತದೆ ಎಂದು ವಿಜಯನ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರವು ರಾಜ್ಯಗಳೊಂದಿಗೆ ಒಮ್ಮತ ಸಾಧಿಸಿದ ಬಳಿಕವೇ ಕ್ಷೇತ್ರ ಪುನರ್ವಿಂಗಡಣೆ ವಿಷಯದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಯಾವುದೇ ರಾಜ್ಯದ ಹಾಲಿ ಸಂಸದೀಯ ಕ್ಷೇತ್ರಗಳನ್ನು ಕಡಿಮೆ ಮಾಡದೆ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದ ಕುಟುಂಬ ಯೋಜನೆ ನೀತಿಗಳಿಗೆ ಅನುಗುಣವಾಗಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಕಡಿಮೆ ಮಾಡುವ ಮೂಲಕ ಅವುಗಳನ್ನು ಶಿಕ್ಷಿಸಬಾರದು. ಹಾಗೆ ಮಾಡಿದರೆ ಅದು ಇಂತಹ ಕ್ರಮಗಳಲ್ಲಿ ವಿಫಲಗೊಂಡ ರಾಜ್ಯಗಳನ್ನು ಪುರಸ್ಕರಿಸಿದಂತಾಗುತ್ತದೆ ಎಂದು ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣದ ರಾಜ್ಯಗಳು ಅನುಪಾತದ ಆಧಾರದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆಯಲಿವೆ ಎಂಬ ಕೇಂದ್ರ ಸರಕಾರದ ವಾದಗಳನ್ನು ಕುರುಡಾಗಿ ಒಪ್ಪಿಕೊಳ್ಳುವಂತಿಲ್ಲ ಎಂದು ಹೇಳಿರುವ ಅವರು, ಸ್ಥಾನಗಳ ಹಂಚಿಕೆಯು ಪ್ರಸ್ತುತ ಲೋಕಸಭಾ ಕ್ಷೇತ್ರಗಳ ಶೇಕಡಾವಾರು ಪ್ರಮಾಣವನ್ನು ಆಧರಿಸಿರಲಿದೆಯೇ ಅಥವಾ ಜನಸಂಖ್ಯೆಯನ್ನು ಆಧರಿಸಿರಲಿದೆಯೇ ಎನ್ನುವುದನ್ನು ಅದು ಸ್ಪಷ್ಟಪಡಿಸಿಲ್ಲ ಎಂದು ಬೆಟ್ಟು ಮಾಡಿದ್ದಾರೆ.
ಇವೆರಡಲ್ಲಿ ಹೇಗೇ ಆದರೂ ದಕ್ಷಿಣದ ರಾಜ್ಯಗಳು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿವೆ. ಏಕಪಕ್ಷೀಯ ಕ್ರಮಗಳನ್ನು ತಪ್ಪಿಸುವುದು ಮತ್ತು ಪ್ರಜಾಪ್ರಭುತ್ವ ಹಾಗೂ ಒಕ್ಕೂಟವಾದದ ತತ್ವಗಳನ್ನು ರಕ್ಷಿಸುವುದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ ಎಂದು ವಿಜಯನ್ ಪ್ರತಿಪಾದಿಸಿದ್ದಾರೆ.