ಕೇರಳ| ಹೆಚ್ಚುವರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಪ್ರಕರಣ; ಸಿಪಿಎಂ ನಾಯಕಿ ದಿವ್ಯಾಗೆ ಜಾಮೀನು ಮಂಜೂರು
ಪಿಪಿ ದಿವ್ಯಾ (Photo:newindianexpress.com)
ಕೇರಳ: ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಡಿಎಂ) ನವೀನ್ ಬಾಬು ಆತ್ಮಹತ್ಯೆಗೆ ಕುಮ್ಮಕ್ಕು ಆರೋಪಕ್ಕೆ ಸಂಬಂಧಿಸಿ ಸಿಪಿಐ(ಎಂ) ನಾಯಕಿ, ಕಣ್ಣೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪಿಪಿ ದಿವ್ಯಾ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜಾಮೀನು ಅರ್ಜಿಯನ್ನು ತಲಶ್ಶೇರಿ ಸೆಷನ್ಸ್ ನ್ಯಾಯಾಲಯ ಇಂದು ಸ್ವೀಕರಿಸಿದೆ. ಅ. 29ರಂದು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕ ದಿವ್ಯಾ ಅವರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ದಿವ್ಯಾ ಪರ ವಕೀಲ ಕೆ.ವಿಶ್ವನ್ ವಾದ ಮಂಡಿಸಿದ್ದು, ನವೀನ್ ಬಾಬು ಕುಟುಂಬದ ಪರವಾಗಿ ವಕೀಲರಾದ ಜಾನ್ ಎಸ್ ರಾಲ್ಫ್ ಮತ್ತು ಪಿಎಂ ಸಜಿತಾ ವಾದ ಮಂಡಿಸಿದ್ದಾರೆ.
ಅಕ್ಟೋಬರ್ 14ರಂದು ಕಣ್ಣೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಅವರಿಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಹ್ವಾನವಿಲ್ಲದೆ ಭಾಗವಹಿಸಿದ್ದ ಸಿಪಿಐ(ಎಂ) ನಾಯಕಿ ಹಾಗೂ ಕಣ್ಣೂರು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ದಿವ್ಯಾ, ಚೆಂಗಲೈನಲ್ಲಿನ ಪೆಟ್ರೋಲ್ ಪಂಪ್ ಒಂದಕ್ಕೆ ನಿರಾಕ್ಷೇಪಣಾ ಪತ್ರ ನೀಡುವಲ್ಲಿ ನವೀನ್ ಬಾಬು ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಮರು ದಿನವೇ ನವೀನ್ ಬಾಬು ತಮ್ಮ ಕ್ವಾರ್ಟರ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ನವೀನ್ ಬಾಬು ಅವರ ಆತ್ಮಹತ್ಯೆಯು ಕೇರಳ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿತ್ತು, ವಿರೋಧ ಪಕ್ಷಗಳು ಆಡಳಿತಾರೂಢ ಸಿಪಿಐ(ಎಂ) ಮೇಲೆ ಮುಗಿಬಿದ್ದಿವೆ. ಇದರ ಬೆನ್ನಿಗೆ, ದಿವ್ಯಾ ಅವರನ್ನು ಕಣ್ಣೂರು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಹುದ್ದೆಯಿಂದ ಆಡಳಿತಾರೂಢ ಸಿಪಿ(ಐ)ಎಂ ಪದಚ್ಯುತಿಗೊಳಿಸಿತ್ತು.