ಕೇರಳ | ನಟಿಯ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮುಖ ಸಾಕ್ಷಿ ನಿರ್ದೇಶಕ ಬಾಲಚಂದ್ರಕುಮಾರ್ ನಿಧನ
PC: x.com/thenewsminute
ಕೊಚ್ಚಿ : 2017ರಲ್ಲಿ ಕೇರಳ ನಟಿಯೊಬ್ಬರ ಮೇಲೆ ನಡೆದಿತ್ತೆನ್ನಲಾದ ಲೈಂಗಿಕ ದೌರ್ಜನ್ಯದ ಪ್ರಮುಖ ಸಾಕ್ಷಿಯಾಗಿದ್ದ ಮಲಯಾಳಂ ಚಿತ್ರ ನಿರ್ದೇಶಕ ಬಾಲಚಂದ್ರಕುಮಾರ್ ಶುಕ್ರವಾರ ನಿಧನರಾದರು ಎಂದು ಚಲನಚಿತ್ರೋದ್ಯಮ ಮೂಲಗಳು ತಿಳಿಸಿವೆ.
ಚೆಂಗನ್ನೂರಿನ ಡಾ. ಕೆ.ಎಂ.ಚೆರಿಯನ್ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ ಸಂಸ್ತೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಚಂದ್ರಕುಮಾರ್, ಇಂದು ಮುಂಜಾನೆ 5.40ರ ವೇಳೆಗೆ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.
ಬಾಲಚಂದ್ರಕುಮಾರ್ ನಿಧನದ ಸುದ್ದಿಯನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿರುವ ಅವರ ಸ್ನೇಹಿತ ಹಾಗೂ ನಟ ಪ್ರಕಾಶ್ ಬಾರೆ, "ಅನಾರೋಗ್ಯ ಮತ್ತು ಅನ್ಯಾಯದ ವಿರುದ್ಧದ ದೀರ್ಘಕಾಲದ ಹೋರಾಟದ ನಂತರ ಬಾಲು ನಿರ್ಗಮಿಸಿದ್ದಾರೆ. ವಿದಾಯಗಳು ಗೆಳೆಯ" ಎಂದು ಬರೆದುಕೊಂಡಿದ್ದಾರೆ.
ಬಾಲಚಂದ್ರಕುಮಾರ್ ಅವರ ಮೃತ ದೇಹವನ್ನು ನಂತರ ತಿರುವನಂತಪುರಂಗೆ ತರಲಾಗುತ್ತದೆ.
ಬಾಲಚಂದ್ರಕುಮಾರ್ ಕಿಡ್ನಿ ವೈಫಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ನಿತ್ಯ ಡಯಾಲಿಸಿಸ್ಗೆ ಒಳಗಾಗಬೇಕಿದ್ದ ಅವರು, ಕೋವಿಡ್-19 ಸೋಂಕು ಹಾಗೂ ಹೃದಯ ಸಮಸ್ಯೆಗೂ ತುತ್ತಾಗಿದ್ದರು ಎನ್ನಲಾಗಿದೆ.
2013ರಲ್ಲಿ ಬಿಡುಗಡೆಯಾಗಿದ್ದ ಕೌಬಾಯ್ ಚಿತ್ರದ ಮೂಲಕ ಬಾಲಚಂದ್ರಕುಮಾರ್ ನಿರ್ದೇಶಕರಾಗಿ ಮಾಲಿವುಡ್ಗೆ ಪದಾರ್ಪಣೆ ಮಾಡಿದ್ದರು.