ಇಂಗ್ಲಿಷ್ ಮಾಧ್ಯಮ ಪಠ್ಯಪುಸ್ತಕಗಳಿಗೆ ಹಿಂದಿ ಹೆಸರು ‘ಅತಾರ್ಕಿಕ’; ನಿರ್ಧಾರ ಮರುಪರಿಶೀಲಿಸುವಂತೆ ಕೋರಿದ ಕೇರಳ ಶಿಕ್ಷಣ ಸಚಿವ

ವಿ. ಶಿವನ್ ಕುಟ್ಟಿ | PTI
ತಿರುವನಂತಪುರಮ್: ಇಂಗ್ಲಿಷ್ ಮಾಧ್ಯಮ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳನ್ನು ನೀಡುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯ ನಿರ್ಧಾರವು ‘‘ಅತಾರ್ಕಿಕವಾಗಿದೆ’’ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಸೋಮವಾರ ಬಣ್ಣಿಸಿದ್ದಾರೆ ಹಾಗೂ ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ.
ನೆರೆಯ ತಮಿಳುನಾಡು ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರಲ್ಲಿ ಪ್ರತಿಪಾದಿಸಲಾಗಿರುವ ಮೂರು ಭಾಷೆ ನೀತಿಯನ್ನು ವಿರೋಧಿಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ. ತ್ರಿಭಾಷಾ ನೀತಿಯು ‘‘ಹಿಂದಿ ಹೇರಿಕೆಯಾಗಿದೆ’’ ಎಂಬುದಾಗಿ ತಮಿಳುನಾಡಿನ ಡಿಎಮ್ಕೆ ಸರಕಾರ ಆರೋಪಿಸಿದೆ.
‘‘ಎನ್ಸಿಇಆರ್ಟಿ ನಿರ್ಧಾರವು ಒಕ್ಕೂಟ ತತ್ವಗಳು ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಅದು ಸರಳ ತರ್ಕವನ್ನು ಮೀರಿರುವುದು ಮಾತ್ರವಲ್ಲ, ಒಬ್ಬರ ಸಾಂಸ್ಕೃತಿಕ ಮೌಲ್ಯಗಳನ್ನು ಇನ್ನೊಬ್ಬರ ಮೇಲೆ ಹೇರುವ ಪ್ರಯತ್ನವಾಗಿದೆ. ಅದು ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿದೆ’’ ಎಂದು ಸಿಪಿಎಮ್ ನಾಯಕರೂ ಆಗಿರುವ ಶಿವನ್ಕುಟ್ಟಿ ಹೇಳಿದರು.
ಈ ಮಾದರಿಯ ಹೇರಿಕೆಯ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ಇತರ ರಾಜ್ಯಗಳನ್ನು ಅವರು ಒತ್ತಾಯಿಸಿದರು.
ಈವರೆಗೆ, ಇಂಗ್ಲಿಷ್ ಮಾಧ್ಯಮ ಪಠ್ಯಪುಸ್ತಕಗಳು ಇಂಗ್ಲಿಷ್ ಶೀರ್ಷಿಕೆಗಳನ್ನು ಹೊಂದಿದ್ದವು. ಈಗ ಅದನ್ನು ಬದಲಿಸಲಾಗಿದೆ. ಈವರೆಗೆ ಆರನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕವನ್ನು ‘‘ಹನಿಸಕಲ್’’ ಎಂಬುದಾಗಿ ಕರೆಯಲಾಗುತ್ತಿತ್ತು. ಇನ್ನು ಅದನ್ನು ‘‘ಪೂರ್ವಿ’’ ಎಂಬುದಾಗಿ ಕರೆಯಲಾಗುತ್ತದೆ. ‘‘ಪೂರ್ವಿ’’ ಹಿಂದಿ ಪದವಾಗಿದ್ದು, ‘‘ಪೂರ್ವ ದಿಕ್ಕಿನ’’ ಎಂಬ ಅರ್ಥವನ್ನು ಹೊಂದಿದೆ. ಅದೂ ಅಲ್ಲದೆ, ಅದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ರಾಗವಾಗಿದೆ.
ಒಂದನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದ ಹೆಸರನ್ನು ‘‘ಮೃದಂಗ’’ ಮತ್ತು ಮೂರನೇ ತರಗತಿಯ ಪಠ್ಯಪುಸ್ತಕದ ಹೆಸರನ್ನು ‘‘ಸಂತೂರು’’ ಎಂಬುದಾಗಿ ಬದಲಾಯಿಸಲಾಗಿದೆ.