ಕೇರಳ: ಬಿಜೆಪಿ ನಾಯಕನ ಕೊಲೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶೆಗೆ ಬೆದರಿಕೆ; ನಾಲ್ವರು ಆರೋಪಿಗಳ ಬಂಧನ
ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ (Photo:livelaw.in)
ಅಲಪ್ಪುಝ: ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ನಂತರ ಮಾವೆಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆ ಒಡ್ಡಿದ್ದ ಆರೋಪಿಗಳ ಪೈಕಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾವೆಲಿಕ್ಕರ ಹೆಚ್ಚುವರಿ ಸೆಷನ್ಸ್ ನ ನಾಲ್ಕನೆ ನ್ಯಾಯಾಧೀಶೆ ಶ್ರೀ ದೇವಿ ವಿರುದ್ಧ ಬಂದಿರುವ ಆನ್ ಲೈನ್ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ, ಅವರ ಭದ್ರತೆಯನ್ನು ಉನ್ನತೀಕರಿಸಿದೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಲಪ್ಪುಝ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಸಂಬಂಧ ಈವರೆಗೆ ಐದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧನಕ್ಕೀಡಾಗಿರುವ ಆರೋಪಿಗಳನ್ನು ಮನ್ನಚೇರಿ ನಿವಾಸಿ ನಸೀರ್ ಮಾನ್ (47), ಮಂಗಳಪುರಂ ನಿವಾಸಿ ರಫಿ (38), ಅಲಪ್ಪುಝ ನಿವಾಸಿ ನವಾಸ್ ನೈನಾ (42) ಹಾಗೂ ಅಂಬಲಪುಝ ನಿವಾಸಿ ಶಾಜಹಾನ್ (36) ಎಂದು ಗುರುತಿಸಲಾಗಿದೆ.
2021ರಲ್ಲಿ ನಡೆದಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಹತ್ಯೆಯ ಪ್ರಕರಣದಲ್ಲಿ ಸದ್ಯ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಗುರುತಿಸಿಕೊಂಡಿರುವ 15 ಮಂದಿಗೆ ಮಾವೆಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು.