"ಕೇರಳ ಸರಕಾರ ನನ್ನನ್ನು ಬೆಂಬಲಿಸಲಿಲ್ಲ, ಮಾನಸಿಕವಾಗಿ ಘಾಸಿಗೊಂಡಿದ್ದೇನೆ": ಮಲಯಾಳಂ ನಟರ ವಿರುದ್ಧ ದೂರು ಸಲ್ಲಿಸಿದ್ದ ಮಹಿಳೆಯ ಅಳಲು
ಸಿಪಿಎಂ ಶಾಸಕ ಎಂ.ಮುಕೇಶ್ | PC : X
ತಿರುವನಂತಪುರ: ಸಿಪಿಎಂ ಶಾಸಕ ಎಂ.ಮುಕೇಶ್ ಸೇರಿದಂತೆ ಪ್ರಮುಖ ನಟರ ವಿರುದ್ಧ ಅತ್ಯಾಚಾರದ ಆರೋಪಗಳನ್ನು ದಾಖಲಿಸಿದ್ದ ಮಲಯಾಳಂ ನಟಿಯೋರ್ವರು ಕೇರಳ ಸರಕಾರವು ತನ್ನನ್ನು ಬೆಂಬಲಿಸಲಿಲ್ಲ ಮತ್ತು ಇದು ತನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿದೆ, ಹೀಗಾಗಿ ಕಾನೂನು ಸಮರವನ್ನು ಮುಂದುವರಿಸುದಿಲ್ಲ ಎಂದು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದ್ದ ನ್ಯಾ. ಹೇಮಾ ಸಮಿತಿಯ ವರದಿ ಬಿಡುಗಡೆಗೊಂಡ ಬಳಿಕ ಎರ್ನಾಕುಲಂ ಮೂಲದ ನಟಿ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು.
ನಟಿಯ ದೂರಿನ ಮೇರೆಗೆ ಪೋಲಿಸರು ನಟರಾದ ಮುಕೇಶ, ಜಯಸೂರ್ಯ,ಎಡವೇಲ ಬಾಬು ಮತ್ತು ಮಣಿಯಾನಪಿಲ್ಲ ರಾಜು, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ಕಾಂಗ್ರೆಸ್ ಸಂಯೋಜಿತ ವಕೀಲರ ಸಂಘದ ನಾಯಕ ವಿ.ಎಸ್.ಚಂದ್ರಶೇಖರನ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ನಟಿ ಹಿರಿಯ ಚಿತ್ರ ನಿರ್ಮಾಪಕ ಬಾಲಚಂದ್ರನ್ ಮೆನನ್ ವಿರುದ್ಧವೂ ದೂರಿದ್ದರಾದರೂ ಪೋಲಿಸರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿರಲಿಲ್ಲ. ಮತ್ತೊಂದೆಡೆ ತನ್ನ ಸಂಬಂಧಿಯೋರ್ವರ ದೂರಿನ ಬಳಿಕ ನಟಿ ಪೊಕ್ಸೊ ಪ್ರಕರಣವನ್ನು ಎದುರಿಸಿದ್ದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಟಿ, ‘ನಾನು ಪ್ರಕರಣದಿಂದ ಹೊರಬಂದಾಗ ಸರಕಾರವು ನನ್ನನ್ನು ಬೆಂಬಲಿಸಬೇಕಿತ್ತು. ಕೇರಳ ಸರಕಾರವು ಯಾವುದೇ ಮಹಿಳೆಯನ್ನು ರಕ್ಷಿಸುತ್ತಿಲ್ಲ, ಮಹಿಳೆಯರಿಗಾಗಿ ನಾನು ಹೊರಬಂದಿದ್ದೆ. ರಾಜ್ಯ ಸರಕಾರವು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ ಮತ್ತು ಇದು ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ನಿಷ್ಪಕ್ಷ ತನಿಖೆ ನಡೆಯಬೇಕು. ಸರಕಾರವು ಆರೋಪಿ ಮತ್ತು ದೂರುದಾರರ ಬಗ್ಗೆ ಸಮಾನ ಧೋರಣೆಯನ್ನು ಹೊಂದಿರಬೇಕಿತ್ತು. ನಾನು ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇನೆ. ಈ ನಿರ್ಧಾರವು ಯಾವುದೇ ರಾಜಿಸೂತ್ರದ ಭಾಗವಲ್ಲ. ಪೊಕ್ಸೊ ಪ್ರಕರಣದಲ್ಲಿ ಯಾರೂ ನನ್ನನ್ನು ಬೆಂಬಲಿಸಿರಲಿಲ್ಲ. ನನ್ನ ವಿರುದ್ಧದ ಸುಳ್ಳು ಪೊಕ್ಸೊ ಪ್ರಕರಣವನ್ನು ಸಾಬೀತುಗೊಳಿಸಲು ಪೋಲಿಸರಿಗೆ ಸಾಧ್ಯವಾಗಲಿಲ್ಲ. ನಾನು ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದರು.
ಮುಕೇಶ್ ಮತ್ತು ಇತರ ನಟರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಬಳಿಕ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಮುಕೇಶ ವಿರುದ್ಧ ಆರೋಪದ ಬಳಿಕ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಪಕ್ಷ ಮತ್ತು ಎಡರಂಗದ ಕೆಲವು ವರ್ಗಗಳು ಆಗ್ರಹಿಸಿದ್ದವು. ಆದರೆ ಅವರ ಬೆನ್ನಹಿಂದೆ ನಿಂತಿದ್ದ ಆಡಳಿತಾರೂಢ ಸಿಪಿಎಂ,ಆರೋಪಗಳಿಂದಾಗಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.
2010ರಲ್ಲಿ ಕೊಚ್ಚಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿತ್ತು ಎಂದು ನಟಿ ಆರೋಪಿಸಿದ್ದರು.
2014ರಲ್ಲಿ ತನ್ನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾದ ಬಳಿಕ ನಟಿ ಕಲಾವಿದರಾದ ಸ್ವಸಿಕಾ,ಬೀನಾ ಆ್ಯಂಟನಿ ಮತ್ತು ಆಕೆಯ ಪತಿ ಮನೋಜ್ ಯೂಟ್ಯೂಬ್ ಚಾನೆಲ್ಗಳಲ್ಲಿ ತನ್ನ ಮಾನಹಾನಿಯನ್ನು ಮಾಡಿದ್ದಾರೆ ಎಂದು ಪೋಲಿಸರಿಗೆ ದೂರು ಸಲ್ಲಿಸಿದ್ದು,ಮೂವರೂ ಆರೋಪಿಗಳ ವಿರುದ್ಧ ಮಹಿಳೆಯ ಘನತೆಗೆ ಅವಮಾನವನ್ನುಂಟು ಮಾಡಿದ ಆರೋಪದಲ್ಲಿ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದರು.