ಕಾರಣ ನೀಡದೆ 4 ಮಸೂದೆಗಳಿಗೆ ಅಂಕಿತ ಬಾಕಿ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ ಕೇರಳ ಸರ್ಕಾರ
ರಾಷ್ಟ್ರಪತಿ ದ್ರೌಪದಿ ಮುರ್ಮು (Photo: PTI)
ಹೊಸದಿಲ್ಲಿ: ಅಭೂತಪೂರ್ವ ಕ್ರಮವೊಂದರಲ್ಲಿ ಕೇರಳ ವಿಧಾನಸಭೆ ಅನುಮೋದಿಸಿದ ನಾಲ್ಕು ಮಸೂದೆಗಳಿಗೆ ಯಾವುದೇ ಕಾರಣ ನೀಡದೆ ಅಂಗೀಕಾರ ತಡೆಹಿಡಿದಿದ್ದಕ್ಕಾಗಿ ಕೇರಳ ಸರ್ಕಾರ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಈ ಮಸೂದೆಗಳಿಗೆ ಅಂಕಿತ ನೀಡದೆ ಅನಿರ್ದಿಷ್ಟ ವಿಳಂಬ ಉಂಟು ಮಾಡಿ ನಂತರ ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ ಕೇರಳ ರಾಜ್ಯಪಾಲರ ಆರಿಫ್ ಮೊಹಮ್ಮದ್ ಖಾನ್ ಅವರ ವಿರುದ್ಧವೂ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ನಾಲ್ಕು ಮಸೂದೆಗಳಿಗೆ ಯಾವುದೇ ಕಾರಣ ನೀಡದೆ ಅಂಗೀಕಾರ ತಡೆಹಿಡಿದಿರುವುದು ಸಂವಿಧಾನದ ವಿಧಿ 14, 200 ಮತ್ತು 201 ಇವುಗಳ ಉಲ್ಲಂಘನೆ. ಒಟ್ಟು ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿರುವುದನ್ನು ಸಂವಿಧಾನಿಕ ನೈತಿಕತೆಯ ಆಧಾರದಲ್ಲಿ ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿದೆ.
ರಾಷ್ಟ್ರಪತಿಗಳ ಕಾರ್ಯದರ್ಶಿ, ಕೇರಳ ರಾಜ್ಯಪಾಲ, ರಾಜ್ಯಪಾಲರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಕೇರಳ ಸರ್ಕಾರ ಪರವಾಗಿ ಹಿರಿಯ ವಕೀಲ ಸಿ ಕೆ ಶಶಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಲಿದ್ದಾರೆ.