ರಾಜ್ಯಪಾಲರಿಂದ ಮಸೂದೆ ವಿಲೇವಾರಿ ವಿಳಂಬ: ಸುಪ್ರೀಂ ಕೋರ್ಟ್ ಮೊರೆ ಹೋದ ಕೇರಳ ಸರ್ಕಾರ
Photo: Twitter/@KeralaGovernor
ಹೊಸದಿಲ್ಲಿ: ರಾಜ್ಯ ವಿಧಾನಸಭೆಯು ಅನುಮೋದನೆ ನೀಡಿರುವ ಮಸೂದೆಗಳನ್ನು ವಿಲೇವಾರಿ ಮಾಡುವಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ತಮ್ಮ ಎದುರು ಮಂಡನೆಯಾಗಿರುವ ಮಸೂದೆಗಳನ್ನು ಸೂಕ್ತ ಸಮಯದೊಳಗೆ ವಿಲೇವಾರಿ ಮಾಡುವಂತೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಆದೇಶ ನೀಡಬೇಕು ಎಂದು ಕೇರಳ ಸರ್ಕಾರ ಕೋರಿದೆ.
ನ.2ರಂದು ಸಲ್ಲಿಸಲಾಗಿರುವ ಅರ್ಜಿಯಲ್ಲಿ, ರಾಜ್ಯಪಾಲರು ಸಂವಿಧಾನಕ್ಕೆ ಧಕ್ಕೆ ತರುತ್ತಿದ್ದು, ಅನಿರ್ದಿಷ್ಟಾವಧಿಯ ಕಾಲ ಮಸೂದೆಗಳನ್ನು ತಡೆ ಹಿಡಿಯುವ ಮೂಲಕ ನಿರಂಕುಶವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜ್ಯ ವಿಧಾನಸಭೆಯು ಅನುಮೋದನೆ ನೀಡಿರುವ ಮೂರು ಮಸೂದೆಗಳು ಆರಿಫ್ ಮುಹಮ್ಮದ್ ಖಾನ್ ಬಳಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬಾಕಿಯಿದ್ದು, ಇನ್ನೂ ಮೂರು ಮಸೂದೆಗಳು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಬಾಕಿ ಉಳಿದಿವೆ. ಈ ವರ್ಷದ ಎಪ್ರಿಲ್ 6ರಂದು ಅವರೆದುರು ಮಂಡಿಸಿದ್ದ ಕೇರಳ ಖಾಸಗಿ ಅರಣ್ಯ (ಹೊಂದುವುದು ಮತ್ತು ನಿಯೋಜಿತಗೊಳ್ಳುವುದು) ಮಸೂದೆ, 2023 ಅನ್ನು ವಿಲೇವಾರಿ ಮಾಡಿದ್ದಾರಾದರೂ, ಹಲವಾರು ವರ್ಷಗಳಿಂದ ಬಾಕಿಯಿರುವ ಇನ್ನೂ ಹಲವಾರು ಮಸೂದೆಗಳನ್ನು ವಿಲೇವಾರಿ ಮಾಡಬೇಕಿದೆ ಎಂದು ಹೇಳಿರುವ ಕೇರಳ ಸರ್ಕಾರ, ಈ ಹಿಂದಿನ ಮಸೂದೆಗಳನ್ನು ವಿಲೇವಾರಿ ಮಾಡದಿರುವುದು ಪ್ರಜ್ಞಾಪೂರ್ವಕ ನಡೆಯಾಗಿದೆ ಎಂದು ಆರೋಪಿಸಿದೆ.
ತಮ್ಮೆದುರು ಮಂಡಿಸಲಾಗುವ ಮಸೂದೆಗಳ ಬಗ್ಗೆ ರಾಜ್ಯಪಾಲರು ಸಂಪೂರ್ಣ ವಿವೇಚನಾಧಿಕಾರವನ್ನು ಪ್ರತಿಪಾದಿಸಲಾಗುವುದಿಲ್ಲ ಹಾಗೂ ಇಂತಹ ವರ್ತನೆಯು ಸಂವಿಧಾನದ 200ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ನಿರ್ದಿಷ್ಟ ಸಾಂವಿಧಾನಿಕ ಅವಕಾಶವು ಮಸೂದೆಗಳಿಗೆ ಅನುಮೋದನೆ ನೀಡುವ ಅಥವಾ ತಡೆಹಿಡಿಯುವ ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ರವಾನಿಸುವ ಅಧಿಕಾರವನ್ನು ನೀಡುತ್ತದೆ.
ಕೇರಳ ಸರ್ಕಾರವಲ್ಲದೆ ಆಡಳಿತಾರೂಢ ಪಕ್ಷದ ಶಾಸಕ ಟಿ.ಪಿ.ರಾಮಕೃಷ್ಣನ್ ಕೂಡಾ ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ಎದುರು ಅರ್ಜಿ ಸಲ್ಲಿಸಿದ್ದಾರೆ.