ʼಎಂಪುರಾನ್ʼ ಸಿನೆಮಾ ಪ್ರದರ್ಶನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಎಲ್2 : ಎಂಪುರಾನ್
ತಿರುವನಂತಪುರಂ: ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಮಲಯಾಳಂ ಚಿತ್ರ ‘ಎಲ್2 : ಎಂಪುರಾನ್’ ಪ್ರದರ್ಶನ ನಿಷೇಧಿಸುವಂತೆ ಬಿಜೆಪಿ ನಾಯಕ ವಿವಿ ವಿಜೀಶ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಿ.ಎಸ್. ಡಯಾಸ್ ಅವರಿದ್ದ ಪೀಠವು, ಈ ಅರ್ಜಿಯು ಪ್ರಚಾರಕ್ಕಾಗಿ ಸಲ್ಲಿಸಿದಂತೆ ತೋರುತ್ತಿದೆ ಎಂದು ಹೇಳಿತು.
“ನೀವು ಚಿತ್ರವನ್ನು ನೋಡಿದ್ದೀರಾ? ಇದನ್ನು ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದೆಯಲ್ವಾ? ನಿಮ್ಮ ಆಕ್ಷೇಪಣೆ ಏನು? ನಿಮ್ಮ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನವಿದೆ. ಈ ಚಲನಚಿತ್ರದಿಂದಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂಬ ದೂರನ್ನು ನನಗೆ ತೋರಿಸಿ. ಇವೆಲ್ಲವೂ ಪ್ರಚಾರ ಆಧಾರಿತ ಅರ್ಜಿಗಳು, ಅಲ್ಲದೆ ಬೇರೇನೂ ಅಲ್ಲ” ಎಂದು ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ ಹೇಳಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಯು ಈಗಾಗಲೇ ಚಿತ್ರದ ಪ್ರದರ್ಶನಕ್ಕೆ ಅನುಮತಿಸಿದೆ ಎಂಬ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನು ನ್ಯಾಯಾಲಯವು ವಿಚಾರಣೆಯ ವೇಳೆ ಉಲ್ಲೇಖಿಸಿದೆ. ಬೇಸಿಗೆ ರಜೆಯ ನಂತರ ವಿಸ್ತ್ರತ ವಿಚಾರಣೆ ನಡೆಸುವುದಾಗಿ ಹೇಳಿದ ನ್ಯಾಯಾಲಯವು, ಚಿತ್ರ ತಂಡಕ್ಕೆ ನೋಟಿಸ್ ಜಾರಿ ಮಾಡಿದೆ.