ಹೇಮಾ ಸಮಿತಿ ವರದಿ | ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ಪೀಠ ರಚಿಸಿದ ಕೇರಳ ಹೈಕೋರ್ಟ್
Photo : PTI
ಕೊಚ್ಚಿ : ನ್ಯಾ. ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲು ಐದು ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಪೀಠವನ್ನು ರಚಿಸಲಾಗುವುದು ಎಂದು ಗುರುವಾರ ಕೇರಳ ಹೈಕೋರ್ಟ್ ಪ್ರಕಟಿಸಿದೆ.
ಹೇಮಾ ಸಮಿತಿ ವರದಿ ಬಿಡುಗಡೆಗೆ ಅವಕಾಶ ನೀಡಿರುವ ಏಕಸದಸ್ಯ ಪೀಠದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ಎ.ಮುಹಮ್ಮದ್ ಮುಸ್ತಾಕ್ ಹಾಗೂ ನ್ಯಾ. ಎಸ್.ಮನು ಅವನ್ನೊಳಗೊಂಡ ನ್ಯಾಯಪೀಠವು ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ವಿಶೇಷ ನ್ಯಾಯಪೀಠದಲ್ಲಿ ಮಹಿಳಾ ನ್ಯಾಯಾಧೀಶರಿರಲಿದ್ದಾರೆ ಎಂದು ಹೈಕೋರ್ಟ್ ತನ್ನ ಮೌಖಿಕ ಅಭಿಪ್ರಾಯದಲ್ಲಿ ಹೇಳಿದೆ ಎಂದು ಅರ್ಜಿಗೆ ಸಂಬಂಧಿಸಿದ ವಕೀಲರೊಬ್ಬರು ತಿಳಿಸಿದ್ದಾರೆ.
ಹೇಮಾ ಸಮಿತಿ ವರದಿಯ ಶೋಧನೆ ಹಾಗೂ ಶಿಫಾರಸುಗಳನ್ನು ಸಾರ್ವಜನಿಕಗೊಳಿಸಲು ಅನುಮತಿ ನೀಡಿರುವ ರಾಜ್ಯ ಮಾಹಿತಿ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಆಗಸ್ಟ್ 13ರಂದು ಏಕಸದಸ್ಯ ನ್ಯಾಯಪೀಠವು ವಜಾಗೊಳಿಸಿತ್ತು ಹಾಗೂ ವರದಿ ಬಿಡುಗಡೆಗೆ ಅನುಮತಿ ನೀಡಿತ್ತು.