ʼಕೇರಳ ಮಿನಿ ಪಾಕಿಸ್ತಾನʼ | ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ
ನಿತೇಶ್ ರಾಣೆ | PC : NDTV
ಪುಣೆ : ಕೇರಳವನ್ನು ‘ಮಿನಿ ಪಾಕಿಸ್ತಾನ’ ಎಂದು ಹೇಳಿಕೆ ನೀಡುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿವಾದಕ್ಕೆ ಒಳಗಾಗಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ತಿಗೆ ಆಯ್ಕೆಯಾಗಲು ಇದು ನಿಖರ ಕಾರಣ ಎಂದು ಅವರು ಹೇಳಿದ್ದಾರೆ.
ಕೇರಳ ಮಿನಿ ಪಾಕಿಸ್ತಾನ. ಆದುದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಅಲ್ಲಿ ಚುನಾಯಿತರಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ನೀಡಿದ್ದಾರೆ. ಇದು ಸತ್ಯ; ನೀವು ಬೇಕಾದರೆ ಕೇಳಬಹುದು. ತಮ್ಮೊಂದಿಗೆ ಭಯೋತ್ಪಾದಕರನ್ನು ಕರೆದುಕೊಂಡು ಹೋದ ಬಳಿಕ ಅವರು ಸಂಸದರಾದರು ಎಂದು ರಾಣೆ ಹೇಳಿದ್ದಾರೆ.
ಪುಣೆ ಜಿಲ್ಲೆಯ ಪುರಂದರ್ ತಾಲೂಕಿನಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ ಅಪ್ಝಲ್ ಖಾನ್ ನನ್ನು ಹತ್ಯೆಗೈದ ಚಾರಿತ್ರಿಕ ಘಟನೆಯ ವರ್ಷಾಚರಣೆ ‘ಶಿವ ಪ್ರತಾಪ್ ದಿನ್’ ಕಾರ್ಯಕ್ರಮದಲ್ಲಿ ರಾಣೆ ಅವರು ಮಾತನಾಡಿದರು.
ರಾಣೆ ಅವರು ಕೇರಳ ಭಾರತದ ಭಾಗ ಎಂದು ಸ್ಪಷ್ಟಪಡಿಸಿದರು. ಆದರೆ, ಪಾಕಿಸ್ತಾನದೊಂದಿಗೆ ಹೋಲಿಸಿರುವುದನ್ನು ಸಮರ್ಥಿಸಿಕೊಳ್ಳಲು ಮತಾಂತರ ಹಾಗೂ ಲವ್ ಜಿಹಾದ್ನಂತಹ ವಿಷಯಗಳನ್ನು ಉಲ್ಲೇಖಿಸಿದರು. ಅವರು ತನ್ನ ಪ್ರತಿಪಾದನೆ ನಿಜವಾದುದು ಎಂದು ಹೇಳಿದರು. ಅಲ್ಲದೆ, ತನ್ನ ಪ್ರತಿಪಾದನೆಯನ್ನು ಪರಿಶೀಲಿಸಲು ಆಹ್ವಾನ ನೀಡಿದರು.
ಇತ್ತೀಚೆಗೆ ನಡೆದ 2024ರ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯಲ್ಲಿ ರಾಣೆ ಅವರು ಕಂಕಾವತಿ ಕ್ಷೇತ್ರದಿಂದ ಜಯಗಳಿಸಿದ್ದರು. ನೂತನ ಸಂಪುಟದಲ್ಲಿ ರಾಣೆ ಅವರಿಗೆ ಮೀನುಗಾರಿಕೆ ಹಾಗೂ ಬಂದರು ಖಾತೆಯನ್ನು ನೀಡಲಾಗಿದೆ.
ರಾಣೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನಾವಿಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ರಾಣೆ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡಿರುವ ಅಗತ್ಯದ ಬಗ್ಗೆ ಪ್ರಶ್ನಿಸಿದ್ದಾರೆ.