ಕೇರಳ: ಮಲಪ್ಪುರಂ ನ ಬಾಲಕನಲ್ಲಿ ನಿಫಾ ಸೋಂಕು ಪತ್ತೆ
PC: stock.adobe.com
ಮಲಪ್ಪುರಂ: ಇಲ್ಲಿನ ಪಾಂಡಿಕ್ಕಾಡ್ ನ 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟಿದೆ. ಪುಣೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಈ ಪ್ರಕರಣವನ್ನು ದೃಢಪಡಿಸಿದೆ. ಕೇರಳದಲ್ಲಿ ನಡೆಸಿದ ಪರೀಕ್ಷೆಯ ಬಳಿಕ ಬಾಲಕನಲ್ಲಿ ನಿಫಾ ಸೋಂಕು ಕಂಡುಬಂದಿರುವುದನ್ನು ಆರೋಗ್ಯ ಇಲಾಖೆ ಪ್ರಕಟಿಸಿತ್ತು.
ಆದರೆ, ಎನ್ ಐವಿ ವರದಿ ಬಂದ ಬಳಿಕ ಇದನ್ನು ದೃಢಪಡಿಸಬೇಕಾಗುತ್ತದೆ ಎಂದು ಹೇಳಿತ್ತು. ಶನಿವಾರ ಸಂಜೆ ರಾಜ್ಯ ಸರ್ಕಾರ ವರದಿಯನ್ನು ಪಡೆದಿದ್ದು, ನಿಫಾ ಸೋಂಕಿನ ಪ್ರಕರಣವನ್ನು ಸರ್ಕಾರ ದೃಢಪಡಿಸಿದೆ.
ಶನಿವಾರ ಸಂಜೆ ಜಿಲ್ಲೆಗೆ ಭೇಟಿ ನೀಡಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ನಿಫಾ ತಡೆ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಿದರು. "ಬಾಲಕನಿಗೆ ನಿಫಾ ಸೋಂಕು ತಗುಲಿರುವುದನ್ನು ಎನ್ ಐವಿ ವರದಿ ದೃಢಪಡಿಸಿದೆ. ಆದ್ದರಿಂದ ಜಿಲ್ಲೆಯ ನಿವಾಸಿಗಳು ಹೆಚ್ಚು ಜಾಗೃತರಾಗಿರಬೇಕು. ಸೋಂಕಿತ ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಈ ಮೊದಲು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ವಿವರ ನೀಡಿದರು.
ನಿಫಾ ಮೇಲೆ ನಿಗಾ ಇಡುವ ಸಲುವಾಗಿ ಬಾಲಕನ ಜತೆ ಸಂಪರ್ಕದಲ್ಲಿದ್ದ 214 ಮಂದಿಯ ಹೆಸರನ್ನು ಪಟ್ಟಿ ಮಾಡಲಾಗಿದೆ. 214 ಮಂದಿಯ ಪೈಕಿ 60 ಮಂದಿ ಅತ್ಯಧಿಕ ಅಪಾಯ ಸಾಧ್ಯತೆಯ ವರ್ಗದಲ್ಲಿದ್ದಾರೆ. ನಿಗಾದಲ್ಲಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಅವರ ಮಾದರಿಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.