ಸಿಎಎಗೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್ಗೆ ಕೇರಳ ಅರ್ಜಿ
ಹೊಸದಿಲ್ಲಿ, ಮಾ.17: 2024ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೇರಳ ಸರಕಾರವು ಸುಪ್ರೀಂಕೋರ್ಟ್ನಲ್ಲಿ ಹೊಸತಾಗಿ ಅರ್ಜಿ ಸಲ್ಲಿಸಿದೆ.
ಸಿಎಎ ಕಾಯ್ದೆಯು ಅಸಾಂವಿಧಾನಿಕವಾದುದು ಎಂದು ರಾಜ್ಯ ಸರಕಾರವು ಹೇಳಿದೆ. ಸಿಎಎ ಕಾಯ್ದೆಯು ತಾರತಮ್ಯವಾದಿ, ಏಕಪಕ್ಷೀಯವಾದುದಾಗಿದೆ. ಧರ್ಮ ಹಾಗೂ ದೇಶದ ಆಧಾರದಲ್ಲಿ ಜನರನ್ನು ವರ್ಗೀಕರಿಸುವುದು ಜಾತ್ಯತೀತತೆಯ ತತ್ವಗಳಿಗೆ ವ್ಯತಿರಿಕ್ತವಾಗಿದೆ ಎಂದು ಕೇರಳ ಸರಕಾರವು ಅರ್ಜಿಯಲ್ಲಿ ವಾದಿಸಿದೆ.
2019ರ ಸಿಎಎ ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರುವುದು ಕೇಂದ್ರ ಸರಕಾರಕ್ಕೆ ತುರ್ತು ಅಗತ್ಯದ ವಿಷಯವಲ್ಲ. ಈ ಕಾರಣಕ್ಕಾಗಿ 2024ರಲ್ಲಿ ಅದರ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೇರಳ ಸರಕಾರವು ತನ್ನ ಅರ್ಜಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸಿಎಎ ಕಾಯ್ದೆಗೆ ಯಾವುದೇ ಮಾನದಂಡದ ಸಿದ್ಧಾಂತವಿಲ್ಲ ಹಾಗೂ ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ಶ್ರೀಲಂಕಾ,ಮ್ಯಾನ್ಮಾರ್ ಹಾಗೂ ಭೂತಾನ್ನಂತಹ ದೇಶಗಳ ವಲಸಿಗರಿಗೆ ತಾರತಮ್ಯವನ್ನು ಮಾಡುವ ನಿಲುವನ್ನು ಅದು ಹೊಂದಿದೆ ಎಂದು ಕೇರಳ ಸರಕಾರವು ಈ ಮೊದಲು ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿ ತಿಳಿಸಿತ್ತು.
ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಸಿಎಎ ಕಾಯ್ದೆಯನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರಸರಕಾರವು ಮಾರ್ಚ್ 11ರಂದು ಪ್ರಕಟಿಸಿತ್ತು.
2024ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ಅರ್ಜಿಗಳ ಆಲಿಕೆಯನ್ನು ಮಾರ್ಚ್ 19ರಂದು ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ಸಮ್ಮತಿಸಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಧರ್ಮದ ಆಧಾರದಲ್ಲಿತಾರತಮ್ಯ ಮಾಡುವಂತಹ ಕಾನೂನುಗಳನ್ನು ಹೊಂದಿದೆಯೆಂದು ಆರೋಪಿಸಿ 2019ರ ಅಂತ್ಯದಲ್ಲಿ ಹಾಗೂ 2020ರ ಆರಂಭದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು.