ಕೇರಳ: ಟ್ಯೂಷನ್ಗೆ ತೆರಳುತ್ತಿದ್ದ ಆರು ವರ್ಷದ ಬಾಲಕಿಯ ಅಪಹರಣ
10 ಲಕ್ಷ ರೂ. ಹಣಕ್ಕೆ ಬೇಡಿಕೆ
ಅಬಿಗೆಲ್ ಸಾರಾ ರೇಜಿಳ (Photo credit: onmanorama.com)
ಕೊಲ್ಲಂ: ಸೋಮವಾರ ಸಂಜೆ ಕೊಲ್ಲಂನ ಒಯೂರ್ ಎಂಬಲ್ಲಿರುವ ತನ್ನ ಮನೆಯಿಂದ ಅಣ್ಣನೊಂದಿಗೆ ಟ್ಯೂಷನ್ ತರಗತಿಗೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ಕು ಮಂದಿಯ ತಂಡವೊಂದು ಅಪಹರಿಸಿದ ಘಟನೆ ನಡೆದಿದೆ.
ಸಂಜೆ ಸುಮಾರು 4.30ಕ್ಕೆ ಘಟನೆ ನಡೆದಿದ್ದು ಬಾಲಕಿ ಅಬಿಗೆಲ್ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದಿದ್ದರು. ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಯಿತಾದರೂ ಆತ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ಆತನಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಈ ಘಟನೆ ನಡೆದಾಗ ಮಕ್ಕಳ ಹೆತ್ತವರಾದ ರೇಜಿ ಜಾನ್ ಮತ್ತು ಸಿಜಿ ಜಾನ್ ಮನೆಯಲ್ಲಿರಲಿಲ್ಲ. ಇಬ್ಬರೂ ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ.
ಘಟನೆ ನಡೆದ ಮೂರು ಗಂಟೆಗಳ ತರುವಾಯ ಬಾಲಕಿಯ ತಾಯಿಗೆ ಮಹಿಳೆಯೊಬ್ಬಳಿಂದ ಫೋನ್ ಕರೆ ಬಂದು ರೂ 5 ಲಕ್ಷಕ್ಕೆ ಬೇಡಿಕೆಯಿರಿಸಲಾಗಿತ್ತು. ಮತ್ತೆ ರಾತ್ರಿ 9.30ಕ್ಕೆ ಬಂದ ಕರೆಯಲ್ಲಿ ರೂ 10 ಲಕ್ಷಕ್ಕೆ ಬೇಡಿಕೆ ಇರಿಸಲಾಗಿತ್ತು. ಮಗು ಸುರಕ್ಷಿತವಾಗಿದೆ ಎಂದೂ ಅಪಹರಣಕಾರರು ಹೇಳಿದ್ದಾರೆನ್ನಲಾಗಿದೆ.
ಅಪಹೃತ ಮಗುವಿಗಾಗಿ ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಕಾರೊಂದು ತಮ್ಮನ್ನು ಕಟ್ಟಾಡಿ ಜಂಕ್ಷನ್ನಲ್ಲಿ ಅಡ್ಡಗಟ್ಟಿತ್ತು ಎಂದು ಬಾಲಕಿಯ ಸೋದರ ಹೇಳಿದ್ದಾನೆ. ಕಳೆದೆರಡು ದಿನಗಳಿಂದ ಬಿಳಿ ಸೆಡಾನ್ ಕಾರು ಆ ಪ್ರದೇಶದಲ್ಲಿ ಸಂಚರಿಸುತ್ತಿತ್ತು ಎಂಬ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ.
ಪೊಲೀಸರು ಸೀಸಿಟಿವಿ ದೃಶ್ಯಗಳನ್ನು ಪರಾಮರ್ಶಿಸುತ್ತಿದ್ದಾರೆ. ಅಪಹೃತ ಬಾಲಕಿಯ ತಾಯಿಗೆ ಶಂಕಿತ ಅಪಹರಣಕಾರರಿಂದ ಬಂದ ಕರೆಯ ಜಾಡು ಹಿಡಿದ ಪೊಲೀಸರಿಗೆ ಆ ಫೋನ್ ಕೊಲ್ಲಂನ ಪರಿಪಳ್ಳಿ ಪ್ರದೇಶದ ದಿನಸಿ ಅಂಗಡಿಯವರದ್ದೆಂದು ತಿಳಿದು ಬಂದಿತ್ತು. ಅಂಗಡಿಯವರ ಪ್ರಕಾರ ಒಬ್ಬ ಪುರುಷ ಮತ್ತು ಮಹಿಳೆ ಅಂಗಡಿಗೆ ಬಿಸ್ಕತ್ತು ಖರೀದಿಸಲು ಬಂದಿದ್ದರು. ಆ ವೇಳೆ ಫೋನ್ ಮರೆತು ಬಂದಿರುವುದಾಗಿ ಹೇಳಿ ಅಂಗಡಿಯಲ್ಲಿದ್ದ ಮಹಿಳೆಯ ಫೋನ್ ಪಡೆದು ಸ್ವಲ್ಪ ದೂರ ಹೋಗಿ ಫೋನ್ ಮಾಡಿ ಬಂದಿದ್ದರು. ನಂತರ ಬಿಸ್ಕತ್ತು ಖರೀದಿಸಿ ಅಲ್ಲಿಂದ ಮರಳಿದ್ದರು ಎಂಬ ಮಾಹಿತಿ ದೊರಕಿದೆ.
ಪೊಲೀಸರು ಕೊಲ್ಲಂ, ಇಡುಕ್ಕಿ, ಕೊಟ್ಟಾಯಂ, ಪಟ್ಟಣಂತಿಟ್ಟ, ತಿರುವನಂತಪುರಂ ಮುಂತಾದೆಡೆ ವಾಹನಗಳ ತಪಾಸಣೆ ನಡೆಸುತ್ತಿದ್ದು. ತಡ ರಾತ್ರಿಯವರೆಗೂ ಹೆದ್ದಾರಿಗಳು, ಬಸ್ಸು ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ್ದಾರೆ.