ಕೇರಳ | ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿ: ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ ಕೇರಳ
ತಿರುವನಂತಪುರಂ: ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ದಿನದಿನಕ್ಕೂ ಹೆಚ್ಚುತ್ತಲೇ ಸಾಗುತ್ತಿದ್ದು, ಇತ್ತೀಚೆಗೆ ನೀಲಾಂಬುರ್ ನಲ್ಲಿ ನಡೆದಿರುವ ಕಾಡಾನೆ ದಾಳಿಯಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿಗಳ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಲಪ್ಪುರಂನ ನೀಲಾಂಬುರ್ ನಲ್ಲಿ ನಡೆದಿದ್ದ ಕಾಡಾನೆ ದಾಳಿಯಲ್ಲಿ ಉಚ್ಚಕುಲಂ ನಿವಾಸಿಯಾದ 52 ವರ್ಷದ ಬುಡಕಟ್ಟು ಮಹಿಳೆ ಸರೋಜಿನಿ ಅಲಿಯಾಸ್ ನೀಲಿ ಎಂಬ ಮಹಿಳೆ ಮೃತಪಟ್ಟಿದ್ದರು. ಕಳೆದ 10 ದಿನಗಳಲ್ಲಿ ಕಾಡಾನೆ ದಾಳಿಯಲ್ಲಿ ಸಂಭವಿಸಿರುವ ಎರಡನೆ ಮೃತ್ಯು ಪ್ರಕರಣ ಇದಾಗಿದೆ.
ಎಡಪಕ್ಷಗಳ ಬೆಂಬಲಿತ ಮಾಜಿ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಅವರು ಈ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿಗಳ ಸಂಘರ್ಷದ ಕುರಿತು ಒತ್ತಿ ಹೇಳಿರುವುದಿಂದ ಕೂಡಾ ಈ ಘಟನೆ ರಾಜಕೀಯ ಮಹತ್ವ ಪಡೆದುಕೊಂಡಿದೆ.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ವನ್ಯಜೀವಿಗಳ ಉಪಟಳವನ್ನು ಹತ್ತಿಕ್ಕುವಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಕೇಂದ್ರದ ನಿರ್ದೇಶನಗಳು ಪ್ರಮುಖ ಅಡಚಣೆಗಳಾಗಿವೆ. ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವ ವನ್ಯಜೀವಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಸೀಮಿತ ಅಧಿಕಾರವಿದೆ” ಎಂದು ಹೇಳಿದರು.
ವನ್ಯಜೀವಿಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಈಗಾಗಲೇ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ.
ಇದೇ ವೇಳೆ, ರಾಜ್ಯ ಸರಕಾರವು ಕೇರಳ ಅರಣ್ಯಶ ಕಾಯ್ದೆಗೆ ತರಲು ಉದ್ದೇಶಿಸಲಾಗಿರುವ ಹಲವಾರು ಪ್ರಸ್ತಾವಿತ ತಿದ್ದುಪಡಿಗಳನ್ನು ಹಿಂಪಡೆಯಲು ನಿರ್ಧರಿಸಿದೆ.