ಕೇರಳ: ಗೂಗಲ್ ಮ್ಯಾಪ್ಸ್ ಬಳಸಿಕೊಂಡು ಸಾಗಿದ ವಾಹನ ನೇರ ಕಾಲುವೆಗೆ!
ಸಾಂದರ್ಭಿಕ ಚಿತ್ರ
ಕೊಟ್ಟಾಯಂ: ಗೂಗಲ್ ಮ್ಯಾಪ್ಸ್ ಬಳಸಿ ಪ್ರಯಾಣಿಸುತ್ತಿದ್ದ ಹೈದರಾಬಾದ್ನ ನಾಲ್ಕು ಪ್ರವಾಸಿಗರಿದ್ದ ಕಾರೊಂದು ಅಂತಿಮವಾಗಿ ಕಾಲುವೆಯೊಂದನ್ನು ಪ್ರವೇಶಿಸಿದ ಘಟನೆ ಶನಿವಾರ ನಡೆದಿದೆ. ಕಾರು ನೇರವಾಗಿ ಕೊಟ್ಟಾಯಂನ ಕುರುಪಂತರ ಎಂಬಲ್ಲಿ ಕೆರೆಗೆ ಇಂದು ಮುಂಜಾನೆ ಬಿದ್ದಿದೆ. ಘಟನೆ ಕುರುಪಂತರ ಸಮೀಪದ ಕಡವ್ ಸೇತುವೆಯಲ್ಲಿ ಸುಮಾರು 3 ಗಂಟೆಗೆ ನಡೆದಿದೆ. ಪ್ರವಾಸಿಗರು ಮುನ್ನಾರ್ನಿಂದ ಅಲಪ್ಪುಝಗೆ ತೆರಳುತ್ತಿದ್ದರು ಹಾಗೂ ಸರಿಯಾದ ಮಾರ್ಗ ತಿಳಿಯಲು ಗೂಗಲ್ ಮ್ಯಾಪ್ಸ್ ಅನ್ನು ಅವಲಂಬಿಸಿದ್ದರು. ಆದರೆ ಭಾರೀ ಮಳೆ ಬರುತ್ತಿದ್ದುದರಿಂದ ಚಾಲಕನಿಗೆ ದಾರಿ ತಪ್ಪಿ ಕಾರು ನೇರವಾಗಿ ಸುಮಾರು 150 ಮೀಟರ್ ದೂರದ ತನಕ ಕಾಲುವೆಯಲ್ಲಿ ಸಾಗಿತ್ತು. ಅದೃಷ್ಟವಶಾತ್ ನಾಲ್ಕು ಮಂದಿಯೂ ಯಾವುದೇ ಗಾಯಗಳಿಲ್ಲದೆ ಕಾರಿನ ಬೂಟ್ ಸ್ಪೇಸ್ ಮೂಲಕ ಸುರಕ್ಷಿತವಾಗಿ ಹೊರಬರಲು ಸಫಲರಾದರು.
ಕಾಲುವೆಯನ್ನು ಮಳೆ ನೀರು ತುಂಬಿದ ರಸ್ತೆ ಎಂದು ತಿಳಿದು ಮುಂದಕ್ಕೆ ಸಾಗಿದ್ದಾಗಿ ಚಾಲಕ ಹೇಳಿದ್ದಾರೆ. ವಾಹನದ ಹಿಂದಿನ ಭಾಗ ನೀರಿನಲ್ಲಿ ಮುಳುಗಲು ಆರಂಭಿಸಿದಾಗಲೇ ಅವರು ಸಾಗುತ್ತಿರುವುದು ರಸ್ತೆಯಲ್ಲ ಎಂದು ಅವರಿಗೆ ತಿಳಿದು ಬಂದಿತ್ತು.