ಖಾಲಿಸ್ತಾನಿ-ಗ್ಯಾಂಗ್ಸ್ಟರ್ ಗಳ ನಂಟು: ಆರು ರಾಜ್ಯಗಳ 51 ಸ್ಥಳಗಳಲ್ಲಿ ಎನ್ಐಎ ದಾಳಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ, ದವಿಂದರ್ ಬಾಂಭಿಯಾ ಮತ್ತು ಅರ್ಷ ದಲ್ಲಾ ಗ್ಯಾಂಗ್ ಘಳ ಸಹವರ್ತಿಗಳಿಗೆ ಸೇರಿದ ಆರು ರಾಜ್ಯಗಳಲ್ಲಿಯ 51 ಸ್ಥಳಗಳಲ್ಲಿ ಬುಧವಾರ ದಾಳಿಗಳನ್ನು ನಡೆಸಿದೆ.
ದಾಳಿಗಳನ್ನು ಬೆಳಗಿನ ಜಾವ ನಡೆಸಲಾಗಿದೆ. ಪಂಜಾಬಿನ ಮೋಗಾ ಜಿಲ್ಲೆಯ ತಖ್ತುಪುರ ಗ್ರಾಮದಲ್ಲಿಯ ಸಾರಾಯಿ ಗುತ್ತಿಗೆದಾರನೋರ್ವನ ಮನೆಯ ಮೇಲೆ ಎನ್ಐಎ ಮಿಂಚಿನ ದಾಳಿಯನ್ನು ನಡೆಸಿತ್ತು. ಸುದ್ದಿಸಂಸ್ಥೆಯ ಮೂಲಗಳ ಪ್ರಕಾರ ಅರ್ಷ ದಲ್ಲಾ ಈ ಗುತ್ತಿಗೆದಾರನಿಂದ ಹಫ್ತಾಕ್ಕೆ ಬೇಡಿಕೆಯನ್ನು ಮಂಡಿಸಿದ್ದ ಮತ್ತು ಗುತ್ತಿಗೆದಾರ ಭಾಗಶಃ ಹಣವನ್ನು ದಲ್ಲಾಗೆ ಪಾವತಿಸಿದ್ದ. ಈ ಸಂಬಂಧ ದಾಳಿಗಳು ನಡೆದಿವೆ.
ಉತ್ತರಾಖಂಡದ ಉಧಮಸಿಂಗ್ ನಗರದ ಬಾಜ್ಪುರ ಪೋಲಿಸ್ ಠಾಣಾ ವ್ಯಾಪ್ತಿಯ ಗನ್ ಹೌಸ್ ಮೇಲೂ ಎನ್ಐಎ ದಾಳಿ ನಡೆಸಿದೆ. ಅದೇ ರಾಜ್ಯದ ಕ್ಲೆಮನ್ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೂ ದಾಳಿ ನಡೆದಿದೆ. ರಾಜ್ಯ ಪೊಲೀಸರ ಮಾಹಿತಿಯಂತೆ ಎನ್ಐಎ ತಂಡ ಗನ್ಹೌಸ್ ನಲ್ಲಿಯ ಶಸ್ತ್ರಾಸ್ತ್ರಗಳ ಪರಿಶೀಲನೆಯನ್ನು ನಡೆಸಿದೆ.
ಕೆನಡಾದೊಂದಿಗೆ ನಂಟು ಹೊಂದಿರುವ ಭಯೋತ್ಪಾದನೆ-ಗ್ಯಾಂಗ್ಸ್ಟರ್ ನೆಟ್ ವರ್ಕ್ ನೊಂದಿಗೆ ಗುರುತಿಸಿಕೊಂಡಿರುವ 43 ವ್ಯಕ್ತಿಗಳ ವಿವರಗಳನ್ನು ಎನ್ಐಎ ಬಿಡುಗಡೆಗೊಳಿಸಿದ್ದು, ಕೇಂದ್ರ ಸರಕಾರವು ವಶಪಡಿಸಿಕೊಳ್ಳಬಹುದಾದ ಅವರು ತಮ್ಮ ಹೆಸರುಗಳಲ್ಲಿ ಅಥವಾ ಇತರರ ಹೆಸರುಗಳಲ್ಲಿ ಹೊಂದಿರುವ ಆಸ್ತಿಗಳ ವಿವರಗಳನ್ನು ಹಂಚಿಕೊಳ್ಳುವಂತೆ ಸಾರ್ವಜನಿಕರನ್ನು ಕೋರಿಕೊಂಡಿದೆ.
ಎನ್ಐಎ ಈ ಮೊದಲು,ಕೆನಡಾದಲ್ಲಿ ತಳವೂರಿರುವ ಖಾಲಿಸ್ತಾನ್ ಭಯೋತ್ಪಾದಕ ಗುರಪತ್ವಂತ್ ಸಿಂಗ್ ಪನ್ನೂನ್ಗೆ ಸೇರಿದ ಚಂಡಿಗಡ ಮತ್ತು ಅಮೃತಸರಗಳಲ್ಲಿಯ ಆಸ್ತಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ವಶಪಡಿಸಿಕೊಂಡಿತ್ತು.
ಸೆ.21ರಂದು ಎನ್ಐಎ ದೇಶಭ್ರಷ್ಟ ಗ್ಯಾಂಗಸ್ಟರ್ ಗೋಲ್ಡಿ ಬ್ರಾರ್ ಜೊತೆಗೆ ಗುರುತಿಸಿಕೊಂಡಿರುವ ಪಂಜಾಬ್ ಮತ್ತು ಹರ್ಯಾಣದ 1,000ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತ್ತು.
ಬ್ರಾರ್ ಎನ್ಐಎ ಹೆಸರಿಸಿರುವ ಅತ್ಯಂತ ಅಪೇಕ್ಷಿತ ಗ್ಯಾಂಗ್ಸ್ಟರ್ ಗಳಲ್ಲಿ ಓರ್ವನಾಗಿದ್ದಾನೆ. ಇತ್ತೀಚಿಗೆ ಕೆನಡಾದ ವಿನ್ನಿಪೆಗ್ ನಗರದಲ್ಲಿ ನಡೆದ ಇನ್ನೋರ್ವ ಗ್ಯಾಂಗ್ಸ್ಟರ್ ಸುಖಾ ದುನಿಕೆಯ ಹತ್ಯೆಯ ಹಿಂದೆ ಆತನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಈ ಅಪೇಕ್ಷಿತ ಗ್ಯಾಂಗ್ಸ್ಟರ್ ಗಳಲ್ಲಿ ಹಲವರು ಕೆನಡಾದಿಂದ ಕಾರ್ಯಾಚರಿಸುತ್ತಿದ್ದು,ಇಲ್ಲಿಯ ಖಾಲಿಸ್ತಾನಿ ಬೆಂಬಲಿಗರು ಮತ್ತು ಗ್ಯಾಂಗ್ಸ್ಟರ್ ಗಳೊಂದಿಗೆ ನಿಕಟ ನಂಟುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. 2018ರಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅಮೃತಸರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತವು ಕೆನಡಾದಲ್ಲಿದ್ದಾರೆ ಎನ್ನಲಾದ ಒಂಭತ್ತು ಖಾಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಅವರಿಗೆ ಹಸ್ತಾಂತರಿಸಿತ್ತು.