ಸಂಸತ್ ಭದ್ರತಾ ಕೋಟೆ ಭೇದಿಸಿದ್ದ ನೀಲಂ ವರ್ಮಾ ಬಿಡುಗಡೆ 'ಖಾಪ್' ಪಂಚಾಯತ್ ಆಗ್ರಹ!
ನೀಲಂ ವರ್ಮಾ Photo: twitter.com/timesofindia
ಗಾಶೋ ಖುರ್ದ್: ಹರ್ಯಾಣ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಮೂರು ಖಾಪ್ ಗಳು ಸೋಮವಾರ ಹರ್ಯಾಣದ ಜಿಂದ್ ಜಿಲ್ಲೆಯ ಉಚಾನ ಕಲನ್ ಪಟ್ಟಣದಲ್ಲಿ ಪಂಚಾಯ್ತಿ ನಡೆಸಿ, ಸಂಸತ್ ಭದ್ರತಾಕೋಟೆ ಉಲ್ಲಂಘಿಸಿದ ಪ್ರಕರಣದ ಆರೋಪಿ ನೀಲಂ ವರ್ಮಾ (37) ಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿವೆ.
ಜಿಂದ್ ಮೂಲದ ಮಜ್ರಾ ಖಾಪ್ ನ ವಕ್ತಾರ ಸಮುಂದರ್ ಫೋರ್ ಅಧ್ಯಕ್ಷತೆಯಲ್ಲಿ ನಡೆದ ಈ ಪಂಚಾಯತ್ ನಲ್ಲಿ, ನೀಲಂ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಭಯೋತ್ಪಾದನೆ ವಿರೋಧಿ ಕಾನೂನಿನಡಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಆಕೆಯ ವಿರುದ್ಧ ಮಾಡಿರುವ ಆರೋಪ ಕೈಬಿಡಬೇಕು ಹಾಗೂ ಮಾಧ್ಯಮ ಈ ವಿಚಾರದಲ್ಲಿ ವಸ್ತುನಿಷ್ಠವಾಗಿರಬೇಕು ಎಂಬ ಮೂರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಧ್ವನಿ ಕಳೆದುಕೊಂಡವರ ಪರವಾಗಿ ಧ್ವನಿ ಎತ್ತಿದ ನೀಲಂ ಯಾವುದೇ ತಪ್ಪು ಮಾಡಿಲ್ಲ ಎಂದು ಎಚ್ ಎಸ್ ಕೆಎಂ ಮುಖಂಡ ಅಝಾದ್ ಪಾಲ್ವಾ ಸಮರ್ಥಿಸಿಕೊಂಡರು. ಆಕೆಯ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ. ಅಕೆಯನ್ನು ಘೋರ ಅಪರಾಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಆಕೆ ಮಾಡಿರುವುದು ದುರ್ಬಲರ ಪರವಾಗಿ ಧ್ವನಿ ಎತ್ತುವ ಕಾರ್ಯವನ್ನು ಮಾತ್ರ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಯೋಧ ಭಗತ್ ಸಿಂಗ್ ಅವರಿಂದ ಪ್ರೇರಣೆ ಪಡೆದ ನೀಲಂಗೆ ಕಾನೂನು ನೆರವು ಸೇರಿದಂತೆ ಎಲ್ಲ ಬೆಂಬಲವನ್ನು ನೀಡಲು ಪಂಚಾಯತ್ ಮತ್ತು ಖಾಪ್ ಸದಸ್ಯರು ನಿರ್ಧರಿಸಿದರು.