ಜನಸಂಖ್ಯೆ ಆಧಾರಿತ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ: ಖರ್ಗೆ

ಮಲ್ಲಿಕಾರ್ಜುನ ಖರ್ಗೆ | PC : PTI
ಗದಗ: ಒಂದು ವೇಳೆ ಜನಸಂಖ್ಯೆ ಆಧರಿಸಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ, ಅದರಿಂದ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿತವಾಗಲಿದ್ದು, ಅವುಗಳಿಗೆ ಅನ್ಯಾಯವಾಗಲಿದೆ ಎಂದು ರವಿವಾರ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಅನ್ಯಾಯದ ವಿರುದ್ಧ ಜನರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ದಿ. ಕೆ.ಎಚ್.ಪಾಟೀಲರ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆ ನಡೆಸಲು ಯೋಜಿಸಲಾಗುತ್ತಿದ್ದು, ಆ ಮೂಲಕ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳು ಹಾಗೂ ವಿಧಾನಸಭಾ ಸ್ಥಾನಗಳನ್ನು ತಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಒಂದು ವೇಳೆ ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯೇನಾದರೂ ಜಾರಿಯಾದರೆ, ಉತ್ತರ ರಾಜ್ಯಗಳ ಪ್ರಾತಿನಿಧ್ಯ ಶೇ. 30ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ” ಎಂದು ಆರೋಪಿಸಿದರು.
“ಅಂತಹ ವರದಿಗಳು ಬರುತ್ತಿದ್ದು, ನಾವೆಲ್ಲ ಕಾದು ನೋಡಬೇಕಿದೆ. ಒಂದು ವೇಳೆ ಇದೇನಾದರೂ ಆದರೆ, ಅದು ಅನ್ಯಾಯವಾಗಲಿದೆ. ನಾವೆಲ್ಲ ಈ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ” ಎಂದು ಅವರು ಕರೆ ನೀಡಿದರು.
ಶಿಕ್ಷಣಕ್ಕೆ ಒತ್ತು ನೀಡುವಲ್ಲಿನ ಕೇಂದ್ರ ಸರಕಾರದ ವೈಫಲ್ಯ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರಿ ಸಂಖ್ಯೆುಯ ಉದ್ಯೋಗಗಳು ಖಾಲಿ ಇರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಹಲವಾರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದು, ಶಿಕ್ಷಣ ವಲಯ ತನ್ನ ಅರ್ಹತೆಗೆ ತಕ್ಕಂಥ ಪ್ರಾಮುಖ್ಯತೆಯನ್ನು ಪಡೆಯುತ್ತಿಲ್ಲ ಎಂದೂ ದೂರಿದರು.
“ಕೇಂದ್ರ ಸರಕಾರ ಸಹಕಾರ ಒಕ್ಕೂಟ ವ್ಯವಸ್ಥೆಯ ಕುರಿತು ಮಾತನಾಡುತ್ತದೆ. ಒಂದು ವೇಳೆ ಸಹಕಾರ ಒಕ್ಕೂಟ ವ್ಯವಸ್ಥೆ ಅಸ್ತಿತ್ವದಲ್ಲಿರುವುದಾದರೆ, ಜನರೇಕೆ ತಾವು ಅರ್ಹವಾಗಿರುವ ಅನುದಾನಗಳನ್ನು ಸ್ವೀಕರಿಸುತ್ತಿಲ್ಲ? ಕರ್ನಾಟಕದಲ್ಲಿನ ಸಹಕಾರ ಸಂಘಗಳೇನಾದರೂ ನಬಾರ್ಡ್ ನಿಂದ ಬರಬೇಕಾದ ಅನುದಾನವನ್ನು ಪಡೆಯುತ್ತಿವೆಯೆ? ಈ ಅನುದಾನ ಪ್ರಮಾಣ ಶೇ. 58ರಷ್ಟು ಕಡಿತಗೊಂಡಿದೆ” ಎಂದು ಅವರು ಆರೋಪಿಸಿದರು.
ತಮಗೆ ಎಸಗಲಾಗುತ್ತಿರುವ ಅನ್ಯಾಯಗಳ ವಿರುದ್ಧ ಕರ್ನಾಟಕದ ಜನತೆ ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಭೆಯನ್ನುದ್ದೇಶಿಸಿ ಅವರು ಮನವಿ ಮಾಡಿದರು.
“ಯಾವುದಾದರೂ ವಿಷಯ ಕರ್ನಾಟಕ ಹಾಗೂ ಅದರ ಅಭಿವೃದ್ಧಿಗೆ ಸಂಬಂಧಿಸಿದ್ದರೆ, ರಾಜ್ಯದ ಎಲ್ಲ ಜನರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ಅವರು ಕರೆ ನೀಡಿದರು.