ಸಶಸ್ತ್ರ ಪಡೆಗಳನ್ನು ರಾಜಕೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ| Photo: PTI
ಹೊಸದಿಲ್ಲಿ: ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಯಾತ್ರೆಗೆ ಹಿರಿಯ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿರುವುದು ರಾಜಕೀಯ ವಿವಾದದ ಸ್ವರೂಪ ಪಡೆದಿದ್ದು, ಈ ನಡೆಯು ಆಡಳಿತ ಯಂತ್ರದ ದುರ್ಬಳಕೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಇದಲ್ಲದೆ ರಜೆಯ ಮೇಲಿರುವ ಯೋಧರನ್ನು ರಾಯಭಾರಿ ಯೋಧರನ್ನಾಗಿ ನೇಮಿಸಿ, ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವಂತೆ ರಕ್ಷಣಾ ಇಲಾಖೆಯು ಸೂಚಿಸಿರುವುದಕ್ಕೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಈ ಎರಡೂ ಪ್ರಕರಣಗಳಲ್ಲೂ, ನಾಗರಿಕ ಸೇವಕರು ಹಾಗೂ ಯೋಧರನ್ನು ರಾಜಕೀಯದಿಂದ ಹೊರಗಿಡುವುದು ಸರ್ಕಾರಿ ಆಡಳಿತ ಯಂತ್ರಕ್ಕೆ ಅತ್ಯಗತ್ಯವಾಗಿದೆ. ವಿಶೇಷವಾಗಿ ಚುನಾವಣಾ ತಿಂಗಳಲ್ಲಿ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. "ನಮ್ಮ ಪ್ರಜಾತಂತ್ರ ಹಾಗೂ ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಶಾಹಿ ಹಾಗೂ ಸಶಸ್ತ್ರ ಪಡೆಗಳನ್ನು ರಾಜಕೀಕರಣಗೊಳಿಸುವ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, "ಇದು ಕಾಂಗ್ರೆಸ್ ಪಕ್ಷದ ಪ್ರತ್ಯೇಕತಾ ಪರಿಕಲ್ಪನೆ ಇರಬಹುದು. ಆದರೆ, ಸಾರ್ವಜನಿಕ ಸೇವೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ವೇಳೆ ಮೋದಿ ಸರ್ಕಾರವು ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು ಹಾಗೂ ಅವು ಎಲ್ಲ ಫಲಾನುಭವಿಗಳನ್ನು ತಲುಪುವುದನ್ನು ಖಾತ್ರಿಗೊಳಿಸಬೇಕು ಎಂದು ಬಯಸಿದರೆ, ಬಡವರ ಹಿತಾಸಕ್ತಿಯ ಮನಸ್ಸನ್ನು ಹೊಂದಿರುವ ಯಾರಿಗೂ ಅದರಿಂದ ತೊಂದರೆಯಾಗುವುದಿಲ್ಲ. ಆದರೆ, ಬಡವರನ್ನು ಬಡತನದಲ್ಲಿಯೇ ಇಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯಾಗಿರುವುದರಿಂದ ಯೋಜನೆಗಳ ಸಮರ್ಪಕ ಜಾರಿಗೆ ಅವರ ವಿರೋಧವಿದೆ" ಎಂದು ಆರೋಪಿಸಿದ್ದಾರೆ.