ಸರ್ವ ಪಕ್ಷಗಳ ಸಭೆಗೆ ಗೈರು; ಪ್ರಧಾನಿ ಮೋದಿಗೆ ಖರ್ಗೆ ತರಾಟೆ

ಜೈಪುರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಚರ್ಚಿಸಲು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಹಾಜರಾಗದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
‘‘ಪ್ರಧಾನಿ ಮೋದಿ ಅವರೇ ದೇಶದ ಗೌರವಕ್ಕೆ ಧಕ್ಕೆ ಉಂಟಾದ ಸಂದರ್ಭ ನೀವು ಬಿಹಾರದಲ್ಲಿ ಚುನಾವಣಾ ಭಾಷಣ ಮಾಡಿರುವುದು ದೇಶದ ದುರಾದೃಷ್ಟ’’ ಎಂದು ಖರ್ಗೆ ಅವರು ಇಲ್ಲಿ ‘‘ಸಂವಿಧಾನ ಬಚಾವೊ’’ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು.
‘‘ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಹಾಜರಾಗಿದ್ದರು. ಆದರೆ, ಪ್ರಧಾನಿ ಮೋದಿ ಅವರು ಗೈರು ಹಾಜರಾಗಿರುವುದು ಬೇಸರದ ಸಂಗತಿ. ಬಿಹಾರ್ ದೂರದಲ್ಲಿತ್ತೇ? ಪ್ರಧಾನಿ ಅವರು ಸರ್ವ ಪಕ್ಷಗಳ ಸಭೆಗೆ ಹಾಜರಾಗಬೇಕಿತ್ತು ಹಾಗೂ ಯೋಜನೆಯನ್ನು ವಿವರಿಸಬೇಕಿತ್ತು. ಅವರಿಗೆ ನಮ್ಮಿಂದ ಏನು ಸಹಾಯ ಬೇಕು?’’ ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಅವರು ಹಣದುಬ್ಬರ ಹಾಗೂ ನಿರುದ್ಯೋಗವನ್ನು ನೀಡಿದರು. ಇಂತಹ ಜನರು ದೇಶವನ್ನು ದುರ್ಬಲಗೊಳಿಸುತ್ತಾರೆ. 56 ಇಂಚಿನ ಎದೆ ಕುಗ್ಗಿದೆ ಎಂದರು.
‘‘ದೇಶ ಪರಮೋಚ್ಚ. ಅನಂತರ ಪಕ್ಷಗಳು, ಧರ್ಮ. ದೇಶಕ್ಕಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಕಾಂಗ್ರೆಸ್ ಸಂಘಟಿಸುವ ಕುರಿತು ಮಾತನಾಡುತ್ತದೆ. ಆದರೆ, ಬಿಜೆಪಿ ವಿಭಜಿಸುವ ಕುರಿತು ಮಾತನಾಡುತ್ತದೆ’’ ಎಂದು ಅವರು ಹೇಳಿದರು.
ಈ ದೇಶದಲ್ಲಿ ಸಂವಿಧಾನ ಪರಮೋಚ್ಚ. ನಮ್ಮ ಪ್ರಜಾಪ್ರಭುತ್ವ ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತದೆ ಎಂದು ಅವರು ತಿಳಿಸಿದರು.
ತನಿಖಾ ಸಂಸ್ಥೆಗಳ ದುರ್ಬಬಳಕೆ ಹಾಗೂ ಕಾಂಗ್ರೆಸ್ ನಾಯಕರ ಮೇಲಿನ ದಾಳಿ ಕುರಿತಂತೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಬೆಳೆದಾಗಲೆಲ್ಲ, ಈ ಜನರು ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ನಾವು ದಮನಕ್ಕೊಳಗಾಗುವರಲ್ಲ ಎಂದರು.