ಸ್ಥಾನ ಹಂಚಿಕೆ ಬಿಕ್ಕಟ್ಟಿನ ಬಳಿಕ ಮಮತಾ ಜೊತೆ ಮಾತನಾಡಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: X \ @kharge
ಕಾಂಗ್ರೆಸ್: ಲೋಕಸಭಾ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸುವುದಾಗಿ ತೃಣಮೂಲ ಕಾಂಗ್ರೆಸ್ (ಟಿ ಎಂ ಸಿ) ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ ದಿನಗಳ ಬಳಿಕ, ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ.
‘‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಮತಾ ಬ್ಯಾನರ್ಜಿಯೊಂದಿಗೆ ಮಾತನಾಡಿದ್ದಾರೆ. ಮುಂದುವರಿಯುವುದು ಹೇಗೆ ಎಂಬ ಬಗ್ಗೆ ನಾವು ನಿರ್ಧಾರವೊಂದಕ್ಕೆ ಬರುತ್ತೇವೆ’’ ಎಂದು ಕಾಂಗ್ರೆಸ್ ಪಕ್ಷದ ಸಂಪರ್ಕ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯನ್ನು ತನ್ನ ಪಕ್ಷವು ಏಕಾಂಗಿಯಾಗಿ ಎದುರಿಸುವುದು ಎಂಬುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಘೋಷಿಸಿದ ಒಂದು ದಿನದ ಬಳಿಕ, ಬಿಕ್ಕಟ್ಟನ್ನು ತಿಳಿಗೊಳಿಸಲು ಖರ್ಗೆ ಗುರುವಾರ ಅವರೊಂದಿಗೆ ಮಾತನಾಡಿದ್ದಾರೆ ಎಂದು ಜೈರಾಮ್ ರಮೇಶ್ ತಿಳಿಸಿದರು.
ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯು ಬಿಹಾರದಲ್ಲಿ ಹಾದು ಹೋಗುವಾಗ ಜನವರಿ 30ರಂದು ಅದರಲ್ಲಿ ಭಾಗವಹಿಸುವಂತೆ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಗೆ ಖರ್ಗೆ ಮನವಿಯನ್ನೂ ಮಾಡಿದ್ದಾರೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಗೆ ಮುನ್ನ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳವು ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳಲಿದೆ ಎಂಬ ಊಹಾಪೋಹಗಳ ನಡುವೆಯೇ ಖರ್ಗೆ ಈ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಪಶ್ಚಿಮ ಬಂಗಾಳದಲ್ಲಿ ಸ್ಥಾನ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಪಕ್ಷಗಳ ನಡುವೆ ಬಿಕ್ಕಟ್ಟು ಏರ್ಪಟ್ಟ ಬಳಿಕ ಖರ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಮಮತಾ ಬ್ಯಾನರ್ಜಿ ‘‘ಕೆಲವೇ ನಿಮಿಷಗಳ ಕಾಲ’’ ಭಾಗವಹಿಸಿದರೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರತಿಯೊಬ್ಬರೂ ಸಂತೋಷ ಪಡುತ್ತಾರೆ ಎಂದು ಜೈರಾಮ್ ರಮೇಶ್ ಹೇಳಿದರು.