ಬಿಹಾರದಲ್ಲಿ ಖರ್ಗೆ ಹೆಲಿಕಾಪ್ಟರ್ ತಪಾಸಣೆ; ಚುನಾವಣಾಧಿಕಾರಿಗಳು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದ ಕಾಂಗ್ರೆಸ್
Photo: NDTV
ಹೊಸದಿಲ್ಲಿ: ಬಿಹಾರದ ಸಮಷ್ಟಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ಅನ್ನು ತಪಾಸಣೆ ನಡೆಸಲಾಗಿದೆ ಎಂದು ರವಿವಾರ ಆರೋಪಿಸಿರುವ ಕಾಂಗ್ರೆಸ್, ಬಿಜೆಪಿ-NDA ಸದಸ್ಯರಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಿರುವ ಚುನಾವಣಾಧಿಕಾರಿಗಳು, ವಿರೋಧ ಪಕ್ಷಗಳ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಜೇಶ್ ರಾಥೋರ್, “ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಅನ್ನು ತಪಾಸಣೆಗೊಳಪಡಿಸಿದ ನಂತರ, ಇದೀಗ ರಾಜ್ಯದಲ್ಲಿ ಒಂದರ ಹಿಂದೆ ಒಂದು ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್ ಅನ್ನು ಬಿಹಾರದ ಸಮಷ್ಟಿಪುರದಲ್ಲಿ ತಪಾಸಣೆಗೊಳಪಡಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.
“ವಿರೋಧ ಪಕ್ಷಗಳ ವಿರುದ್ಧ ಚುನಾವಣಾ ಆಯೋಗ ಅನುಚಿತವಾಗಿ ವರ್ತಿಸುತ್ತಿದೆ. ಇದು ಪ್ರಜಾಪ್ರಭುತ್ವದ ಹತ್ಯೆ” ಎಂದು ಅವರು ಕಿಡಿ ಕಾರಿದ್ದಾರೆ.
ಬಿಹಾರ ಕಾಂಗ್ರೆಸ್ ಘಟಕದ ಮುಖ್ಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಥೋರ್ ಈ ಪೋಸ್ಟ್ ನೊಂದಿಗೆ ವಿಡಿಯೊವೊಂದನ್ನೂ ಹಂಚಿಕೊಂಡಿದ್ದು, ಬಿಹಾರದ ಮುಖ್ಯ ಚುನಾವಣಾಧಿಕಾರಿಯೇ ಸಮಷ್ಟಿಪುರದಲ್ಲಿ ಖರ್ಗೆ ಅವರ ಹೆಲಿಕಾಪ್ಟರ್ ತಪಾಸಣೆಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪೊಲೀಸರನ್ನೊಳಗೊಂಡಂತೆ ಕೆಲವು ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಸುತ್ತುವರಿದಿರುವುದು ಆ ವಿಡಿಯೊದಲ್ಲಿ ಕಂಡು ಬಂದಿದೆ.