"ದಲಿತನಾಗಿದ್ದಕ್ಕೆ ಕೊಂದರು": ನ್ಯಾಯಾಂಗ ಬಂಧನದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PTI
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಹಾರಾಷ್ಟ್ರದ ಪರ್ಭನಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಬಳಿಕ ನ್ಯಾಯಾಂಗ ಬಂಧನದಲ್ಲಿ ಮೃತಪಟ್ಟಿದ್ದ ದಲಿತ ವ್ಯಕ್ತಿ ಸೋಮನಾಥ ಸೂರ್ಯವಂಶಿಯ ಕುಟುಂಬವನ್ನು ಸೋಮವಾರ ಭೇಟಿಯಾದರು. ಸೂರ್ಯವಂಶಿ ಸಂವಿಧಾನವನ್ನು ರಕ್ಷಿಸುತ್ತಿದ್ದ ದಲಿತನಾಗಿದ್ದಕ್ಕೆ ಅವರನ್ನು ಕೊಲ್ಲಲಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಹುಲ್,‘ಹತ್ಯೆಗೀಡಾದ ವ್ಯಕ್ತಿಯ ಕುಟುಂಬವನ್ನು ಮತ್ತು ಥಳಿಸಲ್ಪಟ್ಟವರನ್ನು ನಾನು ಭೇಟಿಯಾಗಿದ್ದೇನೆ. ಅವರು ಮರಣೋತ್ತರ ಪರೀಕ್ಷಾ ವರದಿ,ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೋರಿಸಿದರು. ಇದು ನೂರಕ್ಕೆ ನೂರು ಕಸ್ಟಡಿ ಸಾವು ಆಗಿದೆ. ಸೂರ್ಯವಂಶಿಯನ್ನು ಹತ್ಯೆ ಮಾಡಲಾಗಿದೆ ಮತ್ತು ಮುಖ್ಯಮಂತ್ರಿಗಳು ಪೋಲಿಸರಿಗೆ ಸಂದೇಶ ರವಾನಿಸಲು ವಿಧಾನಸಭೆಯಲ್ಲಿ ಸುಳ್ಳು ಹೇಳಿದ್ದಾರೆ. ಸೂರ್ಯವಂಶಿ ದಲಿತ ವ್ಯಕ್ತಿಯಾಗಿದ್ದಕ್ಕೆ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಕ್ಕೆ ಕೊಲೆ ಮಾಡಲಾಗಿದೆ ’ ಎಂದು ತಿಳಿಸಿದರು.
‘ಸಂವಿಧಾನವನ್ನು ನಾಶಗೊಳಿಸುವುದು ಆರೆಸ್ಸೆಸ್ನ ಸಿದ್ಧಾಂತವಾಗಿದೆ. ಈ ವಿಷಯವನ್ನು ತಕ್ಷಣ ಬಗೆಹರಿಸಬೇಕು ಮತ್ತು ಇದಕ್ಕೆ ಹೊಣೆಗಾರರನ್ನು ಶಿಕ್ಷಿಸಬೇಕು ಎಂದು ನಾವು ಬಯಸಿದ್ದೇವೆ. ಇಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದರು.
ಡಿ.10ರಂದು ಸಂಜೆ ಪರ್ಭನಿ ರೈಲು ನಿಲ್ದಾಣದ ಹೊರಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಯ ಬಳಿಯ ಗಾಜಿನಿಂದ ಆವೃತ ಪ್ರತಿಕೃತಿಯನ್ನು ಧ್ವಂಸಗೊಳಿಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಡಿ.11ರಂದು ಪರ್ಭನಿಯಲ್ಲಿ ನಡೆದಿದ್ದ ಗಲಭೆ ಮತ್ತು ಬೆಂಕಿ ಹಚ್ಚಿದ ಘಟನೆಗಳಿಗೆ ಸಂಬಂಧಿಸಿದಂತೆ ಶಂಕರನಗರ ನಿವಾಸಿ ಸೂರ್ಯವಂಶಿ(35) ಸೇರಿದಂತೆ 50ಕ್ಕೂ ಅಧಿಕ ಜನರನ್ನು ಪೋಲಿಸರು ಬಂಧಿಸಿದ್ದರು. ನ್ಯಾಯಾಲಯದ ಆದೇಶದಂತೆ ಡಿ.14ರವರೆಗೆ ಪೋಲಿಸ್ ಕಸ್ಟಡಿಯಲ್ಲಿದ್ದ ಸೂರ್ಯವಂಶಿಯನ್ನು ನ್ಯಾಯಾಂಗ ಬಂಧನದ ಬಳಿಕ ಪರ್ಭನಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಡಿ.15ರಂದು ಬೆಳಗ್ಗೆ ಎದೆನೋವು ಎಂದು ದೂರಿಕೊಂಡಿದ್ದ ಅವರು ಅದೇ ದಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಪರ್ಭನಿ ಅಶಾಂತಿಯ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸುವುದಾಗಿ ಈ ಹಿಂದೆ ಪ್ರಕಟಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,ತನಗೆ ಯಾವುದೇ ಹಿಂಸೆ ನೀಡಿರಲಿಲ್ಲ ಎಂದು ಸೂರ್ಯವಂಶಿ ಮ್ಯಾಜಿಸ್ಟೇಟ್ರಿಗೆ ದೃಢಪಡಿಸಿದ್ದರು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಹಿಂಸೆಯ ಲಕ್ಷಣಗಳನ್ನು ತೋರಿಸಿರಲಿಲ್ಲ ಎಂದು ವಿಧಾನಸಭೆಯಲ್ಲಿ ತಿಳಿಸಿದ್ದರು.