ರಾಜ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು: ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಮೋಹನ್ ಭಾಗವತ್ ಪರೋಕ್ಷ ಸಂದೇಶ

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (PTI)
ಹೊಸದಿಲ್ಲಿ : ನಾವು ಎಂದಿಗೂ ನಮ್ಮ ನೆರೆಹೊರೆಯವರಿಗೆ ಅವಮಾನ ಮತ್ತು ಹಾನಿ ಮಾಡುವುದಿಲ್ಲ. ಆದರೆ ಯಾರಾದರೂ ಕೆಟ್ಟದು ಮಾಡಿದರೆ ಬೇರೆ ಆಯ್ಕೆ ಏನು? ರಾಜನ ಕರ್ತವ್ಯ ಪ್ರಜೆಗಳನ್ನು ರಕ್ಷಿಸುವುದಾಗಿದೆ. ರಾಜ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ದಿಲ್ಲಿಯಲ್ಲಿ ವಿಶ್ವ ಹಿಂದೂ ಪರಿಷತ್ನ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ಅವರು ಬರೆದ ʼದಿ ಹಿಂದೂ ಮ್ಯಾನಿಫೆಸ್ಟೋʼ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಈ ಬಗ್ಗೆ ನೇರವಾಗಿ ಮಾತನಾಡಿಲ್ಲ. ಆದರೆ ʼರಾಜನು ತನ್ನ ಕರ್ತವ್ಯವನ್ನು ನಿರ್ವಹಿಸಬೇಕುʼ ಎಂಬ ಅವರ ಉಲ್ಲೇಖವು ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸರಕಾರಕ್ಕೆ ಸಂದೇಶ ನೀಡಿರುವುದು ಎಂದು ವ್ಯಾಖ್ಯಾನಿಸಲಾಗಿದೆ.
ಅಹಿಂಸೆ ನಮ್ಮ ಗುಣ, ಅದು ನಮ್ಮ ಮೌಲ್ಯಗಳು ಕೂಡ ಆಗಿವೆ. ಆದರೆ ಕೆಲವರು ಬದಲಾಗುವುದಿಲ್ಲ, ನೀವು ಏನು ಮಾಡಿದರೂ ಅವರು ಜಗತ್ತನ್ನು ತೊಂದರೆಗೊಳಿಸುತ್ತಿರುತ್ತಾರೆ. ಅವರಿಗೆ ಏನು ಮಾಡಬೇಕು? ಅಹಿಂಸೆ ನಮ್ಮ ಧರ್ಮ, ಪುಂಡರಿಗೆ ಪಾಠ ಕಲಿಸುವುದು ಕೂಡ ನಮ್ಮ ಧರ್ಮ ಎಂದು ಭಾಗವತ್ ಹೇಳಿದರು.
ಮಹಾಕಾವ್ಯ ರಾಮಾಯಣದ ರಾವಣನ ಉದಾಹರಣೆಯನ್ನು ನೀಡಿದ ಭಾಗವತ್, ಮಹಾನ್ ಆಡಳಿತಗಾರನಾಗಿ ಅಥವಾ ಶಿವನ ಅನುಯಾಯಿಯಾಗಿ ಅಥವಾ ಪಾಂಡಿತ್ಯದಲ್ಲಿ ಅತ್ಯುತ್ತಮ ರಾಜನಾಗುವ ಎಲ್ಲಾ ಗುಣಗಳನ್ನು ಆತ ಹೊಂದಿದ್ದನೆಂದು ಹೇಳಲಾಗಿತ್ತು. ಆದರೆ, ಈ ಗುಣಗಳನ್ನು ಒಳ್ಳೆಯದಕ್ಕಾಗಿ ಬಳಸದ ಕಾರಣ ಅವನು ಸಾಯಬೇಕಾಯಿತು. ಏನೇ ಮಾಡಿದರೂ ರಾವಣನನ್ನು ಒಳ್ಳೆಯವನನ್ನಾಗಿ ಮಾಡಲು ಸಾಧ್ಯವಿರಲಿಲ್ಲ. ಇದಕ್ಕಾಗಿಯೇ ದೇವರು ಅವನನ್ನು ಕೊಂದನು ಮತ್ತು ಈ ಹತ್ಯೆಯು ಹಿಂಸೆಯಲ್ಲ. ಇದು ಅಹಿಂಸೆಯಾಗಿದೆ ಮೋಹನ್ ಭಾಗವತ್ ಹೇಳಿದರು.