ಲೋಕಸಭೆಯಲ್ಲಿ ಕಿರಣ್ ರಿಜಿಜು ಬೆದರಿಕೆ ಒಡ್ಡುತ್ತಿದ್ದಾರೆ: ಮಹುವಾ ಮೊಯಿತ್ರಾ ಆರೋಪ
ಅಂತರ್ ಸಂಸದೀಯ ಸಂಘಕ್ಕೆ ಪತ್ರ ಬರೆದ ವಿಪಕ್ಷ ಸಂಸದೆ

ಮಹುವಾ ಮೊಯಿತ್ರಾ , ಕಿರಣ್ ರಜಿಜು | PC : PTI
ಹೊಸದಿಲ್ಲಿ: ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಜಿಜು ನನಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶುಕ್ರವಾರ ಆರೋಪಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಈ ಕುರಿತು ನಾನು ಅಂತರ್ ಸಂಸದೀಯ ಸಂಘಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
"ಹೀಗಾಗಿ ಇಂದು ಲೋಕಸಭೆಯಲ್ಲಿ ಕಿರಣ್ ರಿಜಿಜು ನನಗೆ ಬೆದರಿಕೆ ಒಡ್ಡಿರುವುದು ಸಂಸದೀಯ ನಿಯಮಗಳು ಹಾಗೂ ವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ರಿಜಿಜು ಅವರ ಮಾತುಗಳನ್ನು ಕಡತದಿಂದ ತೆಗೆದು ಹಾಕುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅವರು ದೂರಿದ್ದಾರೆ.
ಕಿರಣ್ ರಿಜಿಜು ಅವರ ನಿರಂತರ ಲಿಂಗಭೇದ ಕಿರುಕುಳ ಹಾಗೂ ಮತ್ತೊಮ್ಮೆ ಬೆದರಿಕೆ ಒಡ್ಡಿರುವುದರ ವಿರುದ್ಧ ಅಂತರ್ ಸಂಸದೀಯ ಸಂಘಕ್ಕೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ.
ನ್ಯಾ. ಬಿ.ಎಚ್.ಲೋಯಾರ ಸಾವಿನ ಕುರಿತು ಮೊಯಿತ್ರಾ ಪ್ರಸ್ತಾಪಿಸಿದ್ದರಿಂದ ಶುಕ್ರವಾರ ಸದನದಲ್ಲಿ ಗದ್ದಲ ಉಂಟಾಯಿತು. ಆಗ ಮಧ್ಯಪ್ರವೇಶಿಸಿದ್ದ ಕಿರಣ್ ರಿಜಿಜು, ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾಗಿರುವ ಪ್ರಕರಣವನ್ನು ಮೊಯಿತ್ರಾ ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿ, ಇಂತಹ ವರ್ತನೆಗಾಗಿ ಅವರ ವಿರುದ್ಧ ಸೂಕ್ತ ಸಂಸದೀಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.