ಹಂಗಾಮಿ ಸ್ಪೀಕರ್ ನೇಮಕವನ್ನು ಕಾಂಗ್ರೆಸ್ ರಾಜಕೀಕರಣಗೊಳಿಸುತ್ತಿದೆ: ಸಚಿವ ಕಿರಣ್ ರಿಜಿಜು ವಾಗ್ದಾಳಿ

Photo: PTI
ಹೊಸದಿಲ್ಲಿ: ಹಂಗಾಮಿ ಲೋಕಸಭಾ ಸ್ಪೀಕರ್ ನೇಮಕವನ್ನು ಕಾಂಗ್ರೆಸ್ ರಾಜಕೀಕರಣಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಲೋಕಸಭೆಯಲ್ಲಿ ಸುದೀರ್ಘ ಕಾಲದ, ಅಡೆತಡೆ ಇಲ್ಲದೆ ಸಂಸದರಾಗಿರುವ ಬಿಜೆಪಿ ನಾಯಕ ಭರ್ತೃಹರಿ ಮಹ್ತಾಬ್ ನೇಮಕದಲ್ಲಿ ಲೋಕಸಭೆಯ ಸಂಪ್ರದಾಯಗಳನ್ನು ಪಾಲಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಡಿಶಾದಿಂದ ಏಳನೆಯ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದ ಮಹ್ತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದು, ಅವರು ನೂತನ ಸಂಸದರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ಸುರೇಶ್ ಎಂಟು ಬಾರಿ ಸಂಸದರಾಗಿದ್ದರೂ, ಅವರು 1998 ಹಾಗೂ 2004ರಲ್ಲಿ ಲೋಕಸಭಾ ಸದಸ್ಯರಾಗಿರಲಿಲ್ಲ. ಹೀಗಾಗಿ ಅವರು ಲೋಕಸಭೆಯಲ್ಲಿ ಯಾವುದೇ ಅಡ್ಡಿಯಿಲ್ಲದ ಅವಧಿಯನ್ನು ಹೊಂದಿಲ್ಲ ಎಂದು ರಿಜಿಜು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಸುರೇಶ್ ಅವರು ದಲಿತರಾಗಿರುವುದರಿಂದ ಅವರನ್ನು ಹಂಗಾಮಿ ಸ್ಪೀಕರ್ ಹುದ್ದೆಗೆ ನಿರ್ಲಕ್ಷಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ರಿಜಿಜು, “ಇದು ಮಾನ್ಯತೆ ಇರುವ ವಾದವೆಂದು ನಿಮಗನ್ನಿಸುತ್ತದೆಯೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಈ ವಿಷಯದ ಕುರಿತು ಸುಳ್ಳುಗಳು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳನ್ನು ಹರಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.