ಕಳಮಶ್ಶೇರಿ ಸ್ಪೋಟಕ್ಕೆ ಹೊಣೆ ಹೊತ್ತು ಕೊಚ್ಚಿ ನಿವಾಸಿ ಪೊಲೀಸರಿಗೆ ಶರಣು ; ವರದಿ
Photo- PTI
ಕೊಚ್ಚಿ : ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೊಚ್ಚಿಯ ವ್ಯಕ್ತಿಯೊಬ್ಬರು ರವಿವಾರ ಕಳಮಶ್ಶೇರಿಯ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಬಾಂಬ್ ಸ್ಪೋಟದ ಹೊಣೆ ಹೊತ್ತು ಕೇರಳ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೂಲಗಳ ಪ್ರಕಾರ, ಸ್ಪೋಟದ ಹೊಣೆ ಹೊತ್ತ ವ್ಯಕ್ತಿ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಬಾಂಬ್ ಅನ್ನು ನಾನೇ ಇಟ್ಟಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಈ ಘಟನೆಯಲ್ಲಿ ಮಹಿಳೆಯ ಮೃತಪಟ್ಟು, 40 ಜನರು ಗಾಯಗೊಂಡಿದ್ದಾರೆ. ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ಸೋಮವಾರ ಸರ್ವಪಕ್ಷ ಸಭೆಯನ್ನು ಕರೆದಿದ್ದು, ಸ್ಪೋಟದ ಬಗ್ಗೆ ಚರ್ಚಿಸಲಿದ್ದಾರೆ.
ಅ.29 ರ ರವಿವಾರ ಕೇರಳದ ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟಗಳ ತನಿಖೆಯಲ್ಲಿ, ಸ್ಪೋಟಕ್ಕೆ ಟಿಫಿನ್ ಬಾಕ್ಸ್ನಲ್ಲಿ ಸುಧಾರಿತ ಸ್ಪೋಟಕ ಸಾಧನವನ್ನು (ಐಇಡಿ) ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಪೋಟದ ಸಮಯದಲ್ಲಿ ಕನ್ವೆನ್ಷನ್ ಸೆಂಟರ್ನಲ್ಲಿ ಸುಮಾರು 2,000 ಜನರು ಪ್ರಾರ್ಥನೆಗಾಗಿ ಜಮಾಯಿಸಿದ್ದರು.
ಹೊಸದಿಲ್ಲಿಯಿಂದ ಎನ್ಐಎ ತಂಡವು ತನಿಖೆ ಮಾಡಲು ಕೇರಳಕ್ಕೆ ತೆರಳಿದೆ ಎಂದು ಮೂಲಗಳು ಖಚಿತಪಡಿಸಿವೆ.
ಪೊಲೀಸರ ಪ್ರಕಾರ, ಯೆಹೋವನ ಪಂಗಡದ ಸಭೆ ನಡೆದ ಸ್ಥಳದಲ್ಲಿ ಸರಣಿ ಸ್ಪೋಟಗಳು ವರದಿಯಾಗಿವೆ. ಬೆಳಗ್ಗೆ ಸುಮಾರು 9.00 ಗಂಟೆಗೆ ಸ್ಪೋಟಗಳು ನಡೆದಿದ್ದು, ಸಭಾಂಗಣವನ್ನು ಸೀಲ್ ಮಾಡಲಾಗಿದ್ದು, ಕೇರಳ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ಸ್ಥಳದಲ್ಲಿದೆ.
ಯೆಹೋವನ ಪಂಗಡ ತಮ್ಮನ್ನು ಪ್ರೊಟೆಸ್ಟಂಟ್ಗಳೆಂದು ಗುರುತಿಸಿಕೊಳ್ಳದ ಕ್ರೈಸ್ತರ ಗುಂಪಾಗಿದೆ. ಯೆಹೋವನ ಪಂಗಡದ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಮೂರು ದಿನಗಳ ಕಾಲ ಪ್ರಾದೇಶಿಕ ಸಮಾವೇಶಗಳೆಂದು ಕರೆಯಲ್ಪಡುವ ದೊಡ್ಡ ಸಭೆಗಳು ನಡೆಯುತ್ತವೆ. ಈ ಸಮಾವೇಶ ಕಳೆದ ಶುಕ್ರವಾರ ಪ್ರಾರಂಭವಾಗಿದ್ದು, ರವಿವಾರ ಕೊನೆಗೊಳ್ಳಬೇಕಿತ್ತು ಎಂದು ಮೂಲಗಳು ತಿಳಿಸಿವೆ.
ಎಲ್ಲ ಗಾಯಾಳುಗಳನ್ನು ಕಳಮಶ್ಶೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿರುವ ಮುಖ್ಯಮಂತ್ರಿಗಳು, ರಾಜ್ಯ ಸಹಕಾರ ಸಚಿವ ವಿಎನ್ ವಾಸವನ್ ಅವರನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ.
ವಾಸವನ್ ಘಟನಾ ಸ್ಥಳಕ್ಕೆ ಆಗಮಿಸಿ ಮಾಧ್ಯಮಗಳಿಗೆ ಮಾತನಾಡಿ, ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ. ಬಾಂಬ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನೆಯ ದೃಷ್ಟಿಯಲ್ಲೂ ಪರಿಶೀಲಿಸಬೇಕು ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಹೇಳಿದ್ದಾರೆ.
ಸ್ಟೋಟದಲ್ಲಿ ಮೃತಪಟ್ಟ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ