ಪೂಮಾ ಜತೆಗೆ 8 ವರ್ಷಗಳ ಒಪ್ಪಂದ ಮುಗಿಸಿದ ಕೊಹ್ಲಿ; ಮುಂದಿನ ಕಂಪನಿ ಯಾವುದು ಗೊತ್ತೇ…?

PC: https://x.com/mufaddal_vohra
ಹೊಸದಿಲ್ಲಿ: ”ಕ್ರೀಡಾ ಉಡುಪುಗಳ ಬ್ರಾಂಡ್ ಪೂಮಾ ಜತೆಗೆ ಎಂಟು ವರ್ಷಗಳ ಸುಧೀರ್ಘ ನಂಟನ್ನು ವಿರಾಟ್ ಕೊಹ್ಲಿ ಕೊನೆಗೊಳಿಸಿದ್ದಾರೆ ಎಂದು ಹೇಳಲಾಗಿದೆ. "ಕ್ರೀಡಾ ಬ್ರಾಂಡ್ ಪೂಮಾ, ಇಂಡಿಯಾ ಕ್ರಿಕೆಟರ್ ಮತ್ತು ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಜತೆಗಿನ ಎಂಟು ವರ್ಷಗಳ ಸುಧೀರ್ಘ ಪಾಲುದಾರಿಕೆಯನ್ನು ಕೊನೆಗೊಳಿಸಿದೆ. ಅವರಿಗೆ ಪೂಮಾ ಉಜ್ವಲ ಭವಿಷ್ಯವನ್ನು ಬಯಸುತ್ತಿದೆ. ಅವರ ಜತೆಗಿನ ಸುದೀರ್ಘ ಹಾಗೂ ಅದ್ಭುತ ಸಹಯೋಗ ಹಲವು ಅದ್ಭುತ ಪ್ರಚಾರಗಳಿಗೆ ಮತ್ತು ಬ್ರಾಂಡ್ ಸಹಯೋಗಕ್ಕೆ ಕಾರಣವಾಗಿದೆ" ಎಂದು ಪೂಮಾ ವಕ್ತಾರ ಹೇಳಿದ್ದಾಗಿ ವರದಿಯಾಗಿದೆ.
ಲೈವ್ ಮಿಂಟ್.ಕಾಮ್ ವರದಿಯ ಪ್ರಕಾರ ಕೊಹ್ಲಿ ಅಜಿಲಿಟಾಸ್ ಕಂಪನಿಯ ಜತೆ ಸಹಯೋಗ ಹೊಂದುವ ನಿರೀಕ್ಷೆ ಇದೆ. 2023ರಲ್ಲಿ ಪೂಮಾ ಇಂಡಿಯಾದ ಮಾಜಿ ಉದ್ಯೋಗಿ ಹಾಗೂ ಆಗ್ನೇಯ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿಯವರಿಂದ ಅಜಿಲಿಟಾಸ್ ಆರಂಭವಾಗಿದೆ. ಕಂಪನಿ ರಿಟೇಲ್ ಕ್ರೀಡಾ ಉಡುಪುಗಳನ್ನು ಭಾರತ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಕಳೆದ ವರ್ಷ ಅಜಿಲಿಟಾಸ್, ಇಟೆಲಿಯನ್ ಕ್ರೀಡಾ ಬ್ರಾಂಡ್ ಲೊಟ್ಟೊದ ಸುಧೀರ್ಘ ಅವಧಿಯ ಲೈಸನ್ಸ್ ಹಕ್ಕನ್ನು ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರದೇಶಕ್ಕೆ ಖರೀದಿಸಿದೆ.
ಎಂಟು ವರ್ಷಗಳ ಪೂಮಾ ಗುತ್ತಿಗೆ ಮುಗಿದ ಹಿನ್ನೆಲೆಯಲ್ಲಿ ಅಜಿಲಿಟಾಸ್ ನಲ್ಲಿ ಹೂಡಿಕೆ ಮಾಡುವ ಸಂಬಂಧ ಕೊಹ್ಲಿ ಮಾತುಕತೆ ನಡೆಸುತ್ತಿದ್ದಾರೆ. ಇದನ್ನು ಅಧಿಕೃತವಾಗಿ ಶೀಘ್ರವೇ ಪ್ರಕಟಿಸಲಿದ್ದಾರೆ ಎಂದು ವರದಿ ಹೇಳಿದೆ.