ಬಿಜೆಪಿ ಮೊದಲ ಪಟ್ಟಿಯಲ್ಲಿ ಶೇಕಡ 20 ಸಂಸದರಿಗೆ ಕೊಕ್
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಮೂರನೇ ಅವಧಿಗೆ ಲೋಕಸಭೆ ಪ್ರವೇಶ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕ್ರಮವಾಗಿ ಗಾಂಧಿನಗರ ಮತ್ತು ಲಕ್ನೋ ಕ್ಷೇತ್ರಗಳಿಂದ ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದ್ದು, 195 ಮಂದಿಯ ಮೊದಲ ಪಟ್ಟಿಯನ್ನು ಚುನಾವಣಾ ಘೋಷಣೆಗೆ ಮುನ್ನವೇ ಆಡಳಿತಾರೂಢ ಎನ್ಡಿಎ ಪ್ರಕಟಿಸಿದೆ.
ಜತೆಗೆ 34 ಮಂದಿ ಕೇಂದ್ರ ಸಚಿವರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಲೋಕಸಭೆ ಸ್ಪೀಕರ್ ಓಂಬಿರ್ಲಾ ರಾಜಸ್ಥಾನದ ಕೋಟಾದಿಂದ ಕಣಕ್ಕಿಳಿಯಲಿದ್ದಾರೆ. 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಆದರೆ ಮೈತ್ರಿಗಾಗಿ ಕಾಯುತ್ತಿರುವ ಮಹಾರಾಷ್ಟ್ರ, ಬಿಹಾರ, ಆಂಧ್ರ ಹಾಗೂ ಪಂಜಾಬ್ನ ಯಾವುದೇ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಅಚ್ಚರಿಯೆಂದರೆ ದೆಹಲಿಯಲ್ಲಿ ನಾಲ್ಕು ಮಂದಿ ಹಾಲಿ ಸಂಸದರಿಗೆ ಬಿಜೆಪಿ ಕೊಕ್ ನೀಡಿದೆ. ಈ ಪೈಕಿ ಮೂರು ಸ್ಥಾನಗಳನ್ನು ಹೊಸಬರಿಗೆ ನೀಡಿದೆ. ಅವರೆಂದರೆ ಬಾನ್ಸುರಿ ಸ್ವರಾಜ್, ಕಲಮಜೀತ್ ಶೆಹ್ರಾವತ್ ಮತ್ತು ಪ್ರವೀಣ್ ಖಂಡೇಲ್ವಾಲಾ. ಅಂತೆಯೇ ಪಶ್ಚಿಮ ಬಂಗಾಲದ ಅಲಿಪುರದೂರು ಕ್ಷೇತ್ರದಲ್ಲಿ ಕೇಂದ್ರ ಸಚಿವ ಜಾನ್ ಬಿರ್ಲಾ ಅವರಿಗೆ ಕೂಡಾ ಅವಕಾಶ ನಿರಾಕರಿಸಿದೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಶೇಕಡ 20ರಷ್ಟು ಮಂದಿ ಸಂಸದರನ್ನು ಕೈಬಿಡಲಾಗಿದೆ. ಶೇಕಡ 47ರಷ್ಟು ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಪಕ್ಷ ಯುವಕರಿಗೆ ಮಣೆ ಹಾಕಿರುವುದನ್ನು ಇದು ಬಿಂಬಿಸುತ್ತದೆ. ಪಟ್ಟಿಯಲ್ಲಿ 28 ಮಹಿಳೆಯರಿದ್ದು, ಒಟ್ಟು ಘೋಷಿತ ಸ್ಥಾನಗಳ ಪೈಕಿ ಶೇಕಡ 14ರಷ್ಟು ಸ್ಥಾನಗಳು ಮಹಿಳೆಯರಿಗೆ ಸಿಕ್ಕಿವೆ. ಇತರ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಸ್ಥಾನಗಳು ಲಭ್ಯವಾಗಿದ್ದು, ಒಟ್ಟು ಸ್ಥಾನಗಳ ಪೈಕಿ 57 ಸ್ಥಾನಗಳು ಓಬಿಸಿ ವರ್ಗಕ್ಕೆ ದಕ್ಕಿವೆ.
195 ಮಂದಿಯ ಪೈಕಿ ಒಬ್ಬರು ಮುಸ್ಲಿಂ ಅಭ್ಯರ್ಥಿಯಾಗಿದುದ, ಕೇರಳದ ಮಲಪ್ಪುರಂ ಕ್ಷೇತ್ರದಿಂದ ಅಬ್ದುಲ್ ಸಲಾಂ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 2014ರ ಬಳಿಕ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.